ಉಡುಪಿ, ಜ. 02 (DaijiworldNews/AA): ಹೊಸ ವರ್ಷದ ಸಂಭ್ರಮಾಚರಣೆ, ಕ್ರಿಸ್ಮಸ್ ಮತ್ತು ಇತರ ಹಬ್ಬಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಅವಧಿಯಲ್ಲಿ ಒಟ್ಟು 1,199 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 9,62,400 ರೂ. ದಂಡ ವಸೂಲಿ ಮಾಡಲಾಗಿದೆ.

ಡಿಸೆಂಬರ್ 24 ರಿಂದ ಡಿಸೆಂಬರ್ 31 ರವರೆಗೆ ನಡೆದ ಈ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಜಿಲ್ಲೆಯಾದ್ಯಂತ ಒಟ್ಟು 29 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿತ್ತು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ತಪಾಸಣೆಯ ವೇಳೆ ದಾಖಲಾದ 1,199 ಪ್ರಕರಣಗಳಿಂದ ಒಟ್ಟು 9,42,600 ರೂ. ದಂಡ ವಿಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರು ಮಾಹಿತಿ ನೀಡಿದ್ದಾರೆ.
103 ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣಗಳು, 803 ಹೆಲ್ಮೆಟ್ ರಹಿತ ಚಲಾಯಿಸಿದ ಪ್ರಕರಣಗಳು, 243 ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ ಪ್ರಕರಣಗಳು, 35 ತ್ರಿಬಲ್ ರೈಡಿಂಗ್ ಪ್ರಕರಣಗಳು, 15 ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದ ಪ್ರಕರಣಗಳು ಸೇರಿವೆ ಎಂದು ದಾಖಲಾದ ಪ್ರಕರಣಗಳ ವಿವರವನ್ನು ಪೊಲೀಸ್ ಅಧೀಕ್ಷಕರು ನೀಡಿದ್ದಾರೆ.