ಮಂಗಳೂರು,ಜು 12 (Daijiworld News/MSP): ಐಷಾರಾಮಿ ಕಾರೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕವಾಗಿ ಗೋ ಸಾಗಾಟ ನಡೆಸುತ್ತಿರುವಾಗ ಮುಂಡಾಜೆ ಸಮೀಪ ಕಾರು ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ವಿಶೇಷ ಅಪರಾಧ ಪತ್ತೆ ದಳ ವಶಕ್ಕೆ ಪಡೆದಿದೆ. ಬಂಧಿತನನ್ನು ಕುಖ್ಯಾತ ಅಂತರ್ ಜಿಲ್ಲಾ ದನಕಳ್ಳ ಬಶೀರ್ (42)ಎಂದು ಗುರುತಿಸಲಾಗಿದೆ.
ದನಕಳ್ಳತನವನ್ನೆ ಕಸುಬನ್ನಾಗಿಸಿಕೊಂಡಿದ್ದ ಮೂಡುಬಿದ್ರೆ ಸಮೀಪದ ನಿವಾಸಿ ಬಶೀರ್ ಯಾನೆ ಆರ್ಗಾ ಬಶೀರ್ ಈತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಸಹಚರರು ಬಂಧಿತರಾಗಿದ್ದರೂ ಮುಂಡಾಜೆಯಲ್ಲಿ ನಡೆದ ಘಟನೆಯ ಬಳಿಕ ತಲೆ ಮರೆಸಿಕೊಂಡು ಬಳಿಕ ನ್ಯಾಯಾಲಯದಿಂದ ಮುಂಜಾಗ್ರತಾ ಜಾಮೀನು ಪಡೆದು ಬಳಿಕ ಅದೇ ಕೃತ್ಯದಲ್ಲಿ ತೊಡಗಿಸಿಕೊಂಡು ತಿರುಗುತ್ತಿದ್ದ.
ಇತನ ವಿರುದ್ದ ಕಳಸ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ , ವಿರಾಜ್ ಪೇಟೆ ಒಂದು , ವೇಣೂರು ಪೊಲೀಸ್ ಠಾಣೆಯಲ್ಲಿ ಒಂದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡು , ಮಂಗಳೂರು ನಗರ ಠಾಣೆಯಲ್ಲಿ ನಾಲ್ಕು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು , ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಎರಡು, ಬಜಪೆ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ.
ವಿಶೇಷ ಅಪರಾಧ ಪತ್ತೆ ದಳಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ಬಶೀರ್ ಮೂಡುಬಿದ್ರೆಯ ತೋಡಾರ್ ಬಳಿ ಮೂಡುಬಿದ್ರೆ ಪೊಲೀಸರ ಸಹಕಾರದೊಂದಿಗೆ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಮುಂಡಾಜೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಹಿದಾಯತ್ ನಗರದ ಕಾರು ಮಾಲೀಕ ಅನ್ಸಾರ್ (27) , ಜುಬೇರ್ (26) ಈ ಹಿಂದೆಯೇ ಬಂಧಿಸಲಾಗಿತ್ತು.