ಕುಂದಾಪುರ, ಜು 12 (Daijiworld News/MSP): ಕುಂದಾಪುರ ತಾಲೂಕಿನ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಎಡಮೊಗ್ಗೆ ಕುಮ್ಟಿಬೇರು ಎಂಬಲ್ಲಿ ರಾತ್ರಿ ತಾಯಿ ಜೊತೆಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ಹೆಣ್ಣುಮಗುವನ್ನು ದುಷ್ಕರ್ಮಿಯೊಬ್ಬ ಕದ್ದೊಯ್ದಿದ್ದಾನೆ ಎನ್ನುವ ಹೇಳಿಕೆಯ ಮೂಲಕ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣ ತಿರುವು ಪಡೆದುಕೊಂಡಿದೆ. ಇದೀಗ ಪುಟ್ಟ ಕಂದಮ್ಮ ಸಾನ್ವಿಕಾಳ ಮೃತದೇಹವು ಕುಬ್ಜಾ ನದಿಯಲ್ಲಿಯೇ ಪತ್ತೆಯಾಗಿದ್ದು, ತಾಯಿ ಹಾಗೂ ಮಕ್ಕಳು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಬಲವಾದ ಶಂಕೆ ಪೊಲೀಸರಲ್ಲಿ ಮೂಡಿದೆ.
ಏನಿದು ಘಟನೆ
ಯಡಮೊಗೆ ಗ್ರಾಮದ ಕುಮ್ಟಿ ಬೇರು ನಿವಾಸಿಗಳಾದ ಸಂತೋಷ್ ನಾಯ್ಕ ಮತ್ತು ರೇಖಾ ದಂಪತಿಯ ಕಿರಿಯ ಮಗು ಸಾನ್ವಿಕಾಳನ್ನು ಗುರುವಾರ ಮುಂಜಾನೆ ಮನೆಗೆ ನುಗ್ಗಿದ್ದ ದುಷ್ಕರ್ಮಿ ಅಪಹರಿಸಿದ್ದಾನೆ ಎಂದು ಮಗುವಿನ ತಾಯಿ ರೇಖಾ ವಿವರಿಸಿದ್ದರು. ಈ ವೇಳೆ ದುಷ್ಕರ್ಮಿ ಕುಬ್ಜಾ ನದಿ ದಾಟಿ ಮಗುವನ್ನು ಎತ್ತಿಕೊಂಡು ಹೋಗಿದ್ದು ನಾನು ಮತ್ತು ಆರು ವರ್ಷದ ಮಗ ಕಾಪಾಡಲು ಹೋದರೂ ನದಿ ದಾಟಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದರು. ಈ ಘಟನೆಯಿಂದ ಕುಂದಾಪುರ ಜನತೆಯೇ ಬೆಚ್ಚಿಬಿದ್ದಿದ್ದು ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಪೊಲೀಸರು, ಅಗ್ನಿ ಶಾಮಕ ದಳ, ಸ್ಥಳೀಯರು ಸೇರಿ ಹುಡುಕಿದರೂ ಗುರುವಾರ ಮಗು ಪತ್ತೆಯಾಗಿರಲಿಲ್ಲ.
ಆತ್ಮಹತ್ಯೆಗೆ ಯತ್ನಿಸಿದ ತಾಯಿ?
ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ಸಂತೋಷ್ ನಾಯ್ಕ್ ಹಾಗೂ ರೇಖಾ ಸಣ್ಣ ಪುಟ್ಟ ಜಗಳ ಆಗುತ್ತಿತ್ತು ಎನ್ನಲಾಗಿದೆ. ಸಂತೋಷ್ ನಾಯ್ಕ್ ಅವರ ತಾಯಿ ಮನೆಯಲ್ಲಿದ್ದು, ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದ ಸಂತೋಷ್ ಮನೆಯಲ್ಲಿ ಹೆಚ್ಚಾಗಿ ಇರುತ್ತಿರಲಿಲ್ಲ. ಇದರಿಂದಾಗಿ ಮನೆಯಲ್ಲಿ ಆಗಾಗ ಕಿರಿಕಿರಿ ಇತ್ತೆನ್ನಲಾಗಿದೆ.
ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ತಾಯಿ ರೇಖಾ ಅವರು ತನ್ನಿಬ್ಬರು ಮಕ್ಕಳೊಂದಿಗೆ ಗುರುವಾರ ಮುಂಜಾನೆ ಹತ್ತಿರದ ಕುಬ್ಜಾ ನದಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆದರೆ ಈ ಸಂದರ್ಭ ಕಿರಿಯ ಮಗು ಕೈ ಜಾರಿ ಹರಿಯುವ ನದಿಗೆ ಬಿದ್ದಿತ್ತು. ಇದರಿಂದ ಭಯಗೊಂಡ ರೇಖಾ ಅವರು ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ಮಗು ‘ಅಪಹರಣದ ಕಥೆ’ ಕಟ್ಟಿದ್ದರು ಎಂದು ತನಿಖೆಯಿಂದ ತಿಳಿದುಬಂದಿದ್ದು ಇದನ್ನು ಪೊಲೀಸರು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.