ವಿಟ್ಲ, ಜು 11 (DaijiworldNews/SM): ವಿಟ್ಲಮುಡ್ನೂರು ಗ್ರಾಮದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಹಲಸಿನ ಕಟ್ಟೆ ನಿವಾಸಿ ದೊಂಬಯ್ಯ ಪೂಜಾರಿಯವರ ಪುತ್ರ ಪುನೀತ್ ಯಾನೇ ಪುರುಷೋತ್ತಮ(20) ಬಂಧಿತ ಆರೋಪಿಯಾಗಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮದ ಹದಿನೇಳರ ಹರೆಯದ ಅಪ್ರಾಪ್ತ ಬಾಲಕಿಯನ್ನು ಐವರು ಯುವಕರ ತಂಡವೊಂದು ಬೇರೆ, ಬೇರೆ ಸಮಯದಲ್ಲಿ ಅತ್ಯಾಚಾರ ನಡೆಸಿತ್ತು. ಪರಿಣಾಮವಾಗಿ ಬಾಲಕಿ ಇದೀಗ ಗರ್ಭಿಣಿಯಾಗಿದ್ದಾಳೆ. ಬಳಿಕ ಆಕೆಗೆ ಜೀವಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಇತ್ತ ಬಾಲಕಿಯ ವರ್ತನೆಯಲ್ಲಿ ಸಂಶಯಗೊಂಡ ಮನೆಯವರು ಬಾಲಕಿಯನ್ನು ವಿಚಾರಣೆ ನಡೆಸಿದಾಗ ಅತ್ಯಾಚಾರ ಪ್ರಕರಣ ಬಯಲಿಗೆ ಬಂದಿದೆ. ಈ ಕುರಿತು
ಬಾಲಕಿ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಫೋಕ್ಸೋ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ನಿವಾಸಿ ಮುದ್ದ ನಾಯ್ಕರವರ ಪುತ್ರ ಸ್ಥಳೀಯ ಗ್ರಾ.ಪಂ. ಬಿಲ್ ಕಲೆಕ್ಟರ್ ಕೃಷ್ಣಪ್ಪ, ವಿಟ್ಲ ಮುಡ್ನೂರು ಗ್ರಾಮದ ಶಾಂತಿಯಡ್ಕ ನಿವಾಸಿ ಗಣೇಶ್ರವರ ಪುತ್ರ ಧನುಷ್(23), ಬಾಲಕಿಯ ದೊಡ್ಡಮ್ಮನ ಮಗ ಗಣೇಶ್ ರವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿತ್ತು.
ಇದೀಗ ಪುನೀತ್ ರವರ ಬಂಧನವಾಗುತ್ತಿದ್ದಂತೆ ಪ್ರಕರಣದ ಐವರು ಆರೋಪಿಗಳ ಪೈಕಿ ನಾಲ್ವರ ಬಂಧನವಾದಂತಾಗಿದೆ. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿ ಪವನ್ ನ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ಮುಂದುವರೆಸಲಾಗಿದೆ.