ಅಹಮದಾಬಾದ್, ಡಿ 12: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿ ಪಕ್ಷದ ತೀವ್ರ ಟೀಕೆಯ ನಡುವೆಯೇ ಅಹಮದಾಬಾದ್ ನಲ್ಲಿರುವ ಜಗನ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಎಲ್ಲರಿಗಾಗಿ ಕೆಲಸ ಮಾಡಿಲ್ಲ. ಇವರು ಏಕ ಪಕ್ಷೀಯ ಅಭಿವೃದ್ಧಿ ಮಾಡಿದ್ದಾರೆ. ಅವರಿಂದ ಕೇವಲ 5-10 ಜನರ ಅಭಿವೃದ್ಧಿಯಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ತಿಳಿಸಿದರು.
ದೇವಸ್ಥಾನಕ್ಕೆ ಭೇಟಿ ನೀಡಿದಾಗೆಲ್ಲಾ ಎಲ್ಲರ ಅಭಿವೃದ್ಧಿಗಾಗಿ, ಗುಜರಾತ್ ಜನತೆಯ ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಅವಕಾಶ ಸಿಕ್ಕಾಗಲೆಲ್ಲ ನಾನು ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಕೇದಾರನಾಥ್ ದೇವಸ್ಥಾನಕ್ಕೂ ಭೇಟಿ ನೀಡಿದ್ದೇನೆ. ಈಗ ಹೇಳಿ ನಾನು ನಾನು ದೇವಸ್ಥಾನಕ್ಕೆ ಹೋಗುವುದು ತಪ್ಪಾ? ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರು ದೇವಸ್ಥಾನದ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿ ಜಗನ್ನಾಥ್ ದೇವರ ಆರ್ಶೀವಾದ ಪಡೆದರು ಎಂದು ಜಗನ್ನಾಥ್ ದೇವಸ್ಥಾನದ ಅರ್ಚಕ ದಿಲೀಪ್ ದಾಸ್ ತಿಳಿಸಿದ್ದಾರೆ.