ಮಂಗಳೂರು, ಜು13(Daijiworld News/SS): ಕಾಸರಗೋಡು ಪೈವಳಿಕೆಯ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೈನೈಡ್ ಮೋಹನ್ ಮೇಲಿನ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ.
ನ್ಯಾಯಾಧೀಶೆ ಸೈಯಿದುನ್ನಿಸ ಜು12ರಂದು ತೀರ್ಪು ಪ್ರಕಟಿಸಿದ್ದು, ಜುಲೈ 18ರಂದು ಶಿಕ್ಷೆ ಪ್ರಮಾಣ ಬಗ್ಗೆ ವಿಚಾರಣೆ ನಡೆಯಲಿದೆ.
ಕಾಸರಗೋಡು ಪೈವಳಿಕೆಯ 26 ವರ್ಷದ ಅವಿವಾಹಿತ ಯುವತಿಯೊಬ್ಬರನ್ನು ಸೈನೈಡ್ ಕಿಲ್ಲರ್ ಮೋಹನ್ ಕುಮಾರ್, ಸುಧಾಕರ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯನ್ನು ಚಿನ್ನಾಭರಣ ಧರಿಸಿ ಮಂಗಳೂರಿಗೆ ಬರಲು ಹೇಳಿದ್ದ. ಅದರಂತೆ ಆಕೆ ಅತ್ತೆ ಪರಮೇಶ್ವರಿ ಜತೆ 2006 ಮಾರ್ಚ್ 20ರಂದು ಬಂದಿದ್ದರು. ಅತ್ತೆಯನ್ನು ಮನೆಗೆ ಕಳುಹಿಸಿ ಯುವತಿ ಮತ್ತು ಮೋಹನ್ ಮಡಿಕೇರಿಗೆ ತೆರಳಿದ್ದರು. ಅಲ್ಲಿ ಲಾಡ್ಜ್ನಲ್ಲಿ ಆಕೆ ಮೇಲೆ ಅತ್ಯಾಚಾರ ಮಾಡಿ ಮರುದಿನ ದೇವಸ್ಥಾನಕ್ಕೆ ಹೋಗಲಿಕ್ಕಿದೆ ಎಂದು ಹೇಳಿ ಆಕೆಯ ಚಿನ್ನಾಭರಣ ತೆಗೆದಿಟ್ಟು ಮಡಿಕೇರಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಕರೆ ತಂದಿದ್ದ. ಅಲ್ಲಿ ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್ ನೀಡಿದ್ದ. ಮಹಿಳೆಯರ ಶೌಚಗೃಹಕ್ಕೆ ತೆರಳಿ ಅದನ್ನು ಸೇವಿಸಿದ್ದ ಯುವತಿ ಅಲ್ಲೇ ಮೃತಪಟ್ಟಿದ್ದರು.
ಬಳಿಕ ಆಕೆಯ ಚಿನ್ನಾಭರಣ ಸಹಿತ ಸೈನೈಡ್ ಕಿಲ್ಲರ್ ಮೋಹನ್ ಕುಮಾರ್ ಪರಾರಿಯಾಗಿದ್ದ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೈನೈಡ್ ಮೋಹನ್ 2009 ಅ.21ರಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆ ಸಂದರ್ಭ ವಿಚಾರಣೆ ವೇಳೆ ಪೈವಳಿಕೆಯ ಯುವತಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದನು. ಇದೀಗ ಸೈನೈಡ್ ಮೋಹನ್ ಮೇಲಿನ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ.