ಕುಂದಾಪುರ,ಜು 13 (Daijiworld News/MSP): ಮಾರ್ಬಲ್ ಸಾಗಾಟದ ರೀತಿಯಲ್ಲಿ ಯಾರಿಗೂ ತಿಳಿಯದಂತೆ ಕೋಣಗಳನ್ನು ಮತ್ತು ಎಮ್ಮೆಗಳನ್ನು ಕಾಸರಗೋಡಿಗೆ ಸಾಗಿಸುತ್ತಿದ್ದ ಸಂದರ್ಭ ಲಾರಿಯನ್ನು ಜಾನುವಾರುಗಳ ಸಮೇತ ಕೋಟ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಲ್ಲದೇ ಆರು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ಬಂಧಿತ ಆರೋಪಿಗಳನ್ನು ಮಂಗಳೂರು ಮತ್ತು ಕಾಸರಗೋಡು ನಿವಾಸಿಗಳಾದ ಶಿವಾನಂದ, ಮಾರುತಿ ನಾರಾಯಣ ನಾಯ್ಕ ಹಾಗೂ ಸೈನುದ್ಧೀನ್, ಗಣೇಶನ್, ಹಮೀದ್ ಸಿ.ಹೆಚ್, ಹಾಗೂ ಸಮೀರ್ ಎಂದು ಗುರುತಿಸಲಾಗಿದೆ.
13 ಕೋಣಗಳನ್ನು ಮತ್ತು 7 ಎಮ್ಮೆಗಳನ್ನು 12 ಚಕ್ರದ ರಾಜಸ್ಥಾನ ನೋಂದಣಿಯ ಲೈಲ್ಯಾಂಡ್ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಕೋಟ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ ಸಾಸ್ತಾನ ಟೋಲ್ಗೇಟ್ ಬಳಿ ವಾಹನ ತಪಾಸಣೆ ಸಂದರ್ಬ ಪ್ರಕರಣ ಬೆಳಕಿಗೆ ಬಂದಿದೆ. ಮಾರ್ಬಲ್ ಸಾಗಾಟ ಮಾಡುವ ರೀತಿಯ ಲಾರಿಯಲ್ಲಿ ಜಾನುವಾರುಗಳನ್ನು ಸಾಗಿಸಿ ಪೊಲಿಸರು ಮತ್ತು ಸಾರ್ವಜನಿಕರಿಗೆ ಚಳ್ಳೆಹಣ್ಣು ತಿನ್ನಿಸುವ ಉದ್ಧೇಶ ಹೊಂದಿದ್ದ ಜಾನುವಾರ ಮಾರಾಟ ದಂಧೆಕೋರರು ಲಾರಿಗೆ ರಾಜಸ್ಥಾನ ನೋಂದಣಿ ಲಗತ್ತಿಸಿದ್ದರು. ಆದರೆ ಕೋಟ ಪೊಲೀಸರು ಖಚಿತ ಮಾಹಿತಿಯನ್ನಾಧರಿಸಿ ತಪಾಸಣೆ ನಡೆಸಿದ ವೇಳೆ ಅಕ್ರಮ ಜಾನುವಾರು ಸಾಗಾಟ ಬಹಿರಂಗವಾಗಿದೆ.
ಲಾರಿಗೆ ಟಾಟಾ ಇಂಡಿಕಾ ಕಾರಿನಲ್ಲಿ ಎಸ್ಕಾರ್ಟ್ ನೀಡಲಾಗಿದ್ದು, ಶಿವಾನಂದ ಎಂಬಾತ ಕಾರು ಚಲಾಯಿಸಿದ್ದ, ಕಾರಿನಲ್ಲಿ ಮಾರುತಿ ನಾರಾಯಣ ನಾಯ್ಕ್ ಎಂಬಾತನು ಇದ್ದ. ಕಾರಿನ ಹಿಂದೆ ಲಾರಿ ಬರುತ್ತಿದ್ದು, ಸೈನುದ್ಧೀನ್ ಎಂಬಾತ ಲಾರಿ ಚಲಾಯಿಸುತ್ತಿದ್ದ. ಆತನ ಪಕ್ಕದಲ್ಲಿ ಗಣೇಶನ್ ಇದ್ದು, ಕೋಣಗಳನ್ನು ತುಂಬಿದಲ್ಲಿ ಹಮೀದ್ ಹಾಗೂ ಸಮೀರ್ ಎಂಬುವರು ಇದ್ದರು ಎನ್ನಲಾಗಿದೆ.
ಸುಮಾರು 65 ಸಾವಿರ ಮೌಲ್ಯದ 13 ಕೋಣಗಳು, 35 ಸಾವಿರ ಮೌಲ್ಯದ 7 ಎಮ್ಮೆಗಳು ಲಾರಿಯಲ್ಲಿದ್ದು, ಕಾಸರಗೋಡಿನ ಅಬ್ದುಲ್ ಎಂಬುವರಿಗೆ ಮಾರಾಟ ಮಾಡಲು ಕಸಾಯಿಕಾನೆಗೆ ಪೊಲೀಸರು ಆರು ಆರೋಪಿಗಳ ಸಹಿತ ಜಾನುವಾರುಗಳನ್ನು ಹಾಗೂ ಲಾರಿ ಮತ್ತು ಕಾರನ್ನು ಮತ್ತು 7 ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.