ಬೆಳ್ತಂಗಡಿ, ಜು 13 (Daijiworld News/MSP): ಶ್ರೀಗಂಧದ ದಾಸ್ತಾನು ಕೊಠಡಿಯಿಂದಲೇ ಸುಮಾರು 15 ಲಕ್ಷ ಮೌಲ್ಯದ ಶ್ರೀಗಂಧ ಕಳುವಾದ ವಿದ್ಯಮಾನ ಬೆಳ್ತಂಗಡಿಯಲ್ಲಿ ನಡೆದಿದೆ.
ಅರಣ್ಯ ಇಲಾಖೆಯವರು ಅಕ್ರಮವಾಗಿ ಸಾಗಾಟವಾಗುತ್ತಿದ್ದ ಶ್ರೀಗಂಧವನ್ನು ವಶಕ್ಕೆ ಪಡೆದು ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಗೋಡೌನ್ನಲ್ಲಿ ಇರಿಸಿದ್ದರು. ಇದೀಗ ಅಲ್ಲಿದ್ದ ಸುಮಾರು 15ಲಕ್ಷ ರೂ. ಮೌಲ್ಯದ 350 ಕೆ.ಜಿ. ಶ್ರೀಗಂಧ ಮಾಯವಾಗಿದೆ. ಒಂದು ವಾರದ ಮೊದಲೇ ಈ ಕಳ್ಳತನ ನಡೆದಿದೆ ಎಂದು ಅಂದಾಜಿಸಲಾಗಿದೆ. ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.
ಜು.2ರಂದು ಇದೇ ಗೋಡಾನ್ನಲ್ಲಿ ತಂತಿ ಬೇಲಿ ತೆಗೆಯಲು ಸಿಬ್ಬಂದಿಗಳು ಹೋದಾಗ ಶ್ರೀಗಂಧ ಇದ್ದು ಇದೀಗ ಮತ್ತೆ ಶನಿವಾರ ಬಂದು ತಂತಿ ಬೇಲಿ ತೆಗೆಯಲು ಸಿಬ್ಬಂದಿಯೋರ್ವರು ಹೋದಾಗ ಗೋಡಾನ್ನ ಬೀಗವನ್ನು ತುಂಡರಿಸಿ ಅದಕ್ಕೆ ಗಮ್ ಹಾಕಿದ್ದು ಕಂಡು ಬಂದಿದೆ. ಬಳಿಕ ಕೊಠಡಿಯನ್ನು ಪರಿಶೀಲಿಸಿದಾಗ ಶ್ರೀಗಂದ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬೀಗವೂ ತುಕ್ಕು ಹಿಡಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಆದ್ದರಿಂದ ಒಂದು ವಾರದ ಹಿಂದೆ ಕಳವಾಗಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಫೆಕ್ಟರ್ ಸಂದೇಶ್ ಪಿ.ಜಿ, ಎಸ್ಐ ರವಿ ಬಿ.ಎಸ್, ಐಎಸ್ಐ ಕಲೈಮಾರ್, ಬೆಳ್ತಂಗಡಿ ಉಪವಲಯಾರಣ್ಯಧಿಕಾರಿ ಸುಬ್ಬ ನಾಯ್ಕ್, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿವಿಧ ಹಂತಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.