ಮಂಗಳೂರು, ಜು13(Daijiworld News/SS): ಕೇಂದ್ರ ಸರಕಾರವು ತನ್ನ ಸಂಸ್ಥೆಗಳನ್ನು ದುರುಪಯೋಗಪಡಿಸಿ ಐಟಿ, ಸಿಬಿಐ ತನಿಖೆ ದಾಳಿಯ ಬೆದರಿಕೆಯೊಡ್ಡಿ ಶಾಸಕರ ರಾಜೀನಾಮೆ ನಡೆಸಿರುವುದು ಪ್ರಜಾಪ್ರಭುತ್ವದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದು ಐವನ್ ಡಿಸೋಜ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಮೈತ್ರಿ ಸರಕಾರವನ್ನು ಅಸ್ತಿರಗೊಳಿಸುವಲ್ಲಿ ಪ್ರಸಕ್ತ ಉದ್ಭವವಾಗಿರುವ ವಿದ್ಯಮಾನಕ್ಕೆ ಬಿಜೆಪಿಯೇ ನೇರ ಹೊಣೆ. ಬಿಜೆಪಿ ಕೆಲ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷವೊಡ್ಡಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ. ಕೇಂದ್ರ ಸರಕಾರವು ತನ್ನ ಸಂಸ್ಥೆಗಳನ್ನು ದುರುಪಯೋಗಪಡಿಸಿ ಐಟಿ, ಸಿಬಿಐ ತನಿಖೆ ದಾಳಿಯ ಬೆದರಿಕೆಯೊಡ್ಡಿ ಶಾಸಕರ ರಾಜೀನಾಮೆ ನಡೆಸಿರುವುದು ಪ್ರಜಾಪ್ರಭುತ್ವದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದು ಆರೋಪಿಸಿದರು.
ತೆಲಂಗಾಣ, ಗೋವಾ, ಮಹಾರಾಷ್ಟ್ರದಲ್ಲೂ ಶಾಸಕರನ್ನು ಆಮಿಷವೊಡ್ಡಿ ಸೆಳೆಯುವ ಯತ್ನ ಮಾಡಲಾಗುತ್ತಿದೆ. ಅತೃಪ್ತ ಶಾಸಕರು ಬಿಜೆಪಿಯ ಬಂಧನದಿಂದ ಪಕ್ಷಕ್ಕೆ ಹಿಂದಿರುಗಿ ರಾಜೀನಾಮೆ ಹಿಂಪಡೆಯುತ್ತಾರೆ. ರಾಜಕೀಯ ವಿದ್ಯಮಾನ ಗಮನಿಸಿ ಬಹುಮತ ಸಾಬೀತುಪಡಿಸುವ ಕಾರ್ಯವನ್ನು ನಾವು ಮಾಡಲಿದ್ದೇವೆ. ಸರಕಾರ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಡಿಸಿದರು.
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಸಮಯದಿಂದ ಬಿಜೆಪಿಯು ಸರಕಾರವನ್ನು ಅಸ್ತಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದು, ಇದೀಗ ಆರನೇ ಬಾರಿಗೆ ಆ ಕಾರ್ಯಕ್ಕೆ ಮುಂದಾಗಿದೆ. ಅಪರೇಶನ್ ಕಮಲದ ಯತ್ನದಲ್ಲಿ 2009ರಲ್ಲಿ ಯಶಸ್ವಿಯಾಗಿದ್ದ ಬಿಜೆಪಿ 2013ರಲ್ಲಿ ವಿಪಕ್ಷ ಸ್ಥಾನವನ್ನು ಅನುಭವಿಸಬೇಕಾಯಿತು. ಚುನಾಯಿತ ಪ್ರತಿನಿಧಿಗಳು ಒಂದು ಪಕ್ಷದಿಂದ ಮತ್ತೊಂದು ಪಕ್ಷವನ್ನು ಸೇರುವುದು ತಪ್ಪಲ್ಲ ಹಾಗೂ ಅದು ಅಸ್ವಾಭಾವಿಕ ಪ್ರಕ್ರಿಯೆಯೂ ಅಲ್ಲ. ಆದರೆ ಶಾಸಕರನ್ನು ರಾಜೀನಾಮೆ ಕೊಡಿಸಿ ಕಾನೂನು ಗಾಳಿಗೆ ತೂರಿ ಸದನದ ಬಲ ಕಡಿಮೆ ಮಾಡುವ ಪ್ರಕ್ರಿಯೆ ರಾಜ್ಯದಲ್ಲಿ 2ನೇ ಬಾರಿಗೆ ಬಿಜೆಪಿಯಿಂದ ನಡೆದಿದೆ ಎಂದು ಟೀಕಿಸಿದರು.
ಸಚಿವರಾಗಿದ್ದವರನ್ನು ಕೊಂಡುಕೊಂಡು ರಾಜೀನಾಮೆ ನೀಡಿಸುವುದಕ್ಕೆ ಅರ್ಥ ಬೇಕಲ್ಲ. ರಾಜೀನಾಮೆ ನೀಡುವುದು ಸ್ಪೀಕರ್ಗೆ. ಆದರೆ ರಾಜ್ಯಪಾಲರಿಗೆ ರಾಜೀನಾಮೆ ನೀಡುವ ಮೂಲಕ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿದರು.
ಯಾವುದೇ ಶಾಸಕರು ವೈಯಕ್ತಿಕ ನೆಲೆಯಲ್ಲಿ ರಾಜೀನಾಮೆ ನೀಡಬೇಕಾದರೂ ಅದು ನೈಜವಾಗಿರಬೇಕು. ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ, ಅಭಿವೃದ್ಧಿ ಮಾಡಲು ಆಗುತ್ತಿಲ್ಲ ಎಂದು ರಾಜೀನಾಮೆ ನೀಡಬಹುದಾಗಿದ್ದರೂ ಇದೀಗ ಪೊಲೀಸ್ ರಕ್ಷಣೆಯಲ್ಲಿ ಬಂದು ರಾಜೀನಾಮೆ ನೀಡಲು ಪ್ರೇರೇಪಿಸುವಂತಹ ಕ್ರಮ ಜನಪ್ರತಿನಿಧಿಗಳು ತಲೆತಗ್ಗಿಸುವ ಕೆಲಸ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಬಣ್ಣ ಬಯಲಾಗಿದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದು ಜನತೆಗೆ ಮನದಟ್ಟಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಗಾಳಿಗೆ ತೂರಿ ದೇಶವನ್ನು ಆಡಳಿತ ಮಾಡುತ್ತಿರುವ ಪಕ್ಷವೊಂದು ಈ ರೀತಿಯಲ್ಲಿ ವರ್ತಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.