ಉಳ್ಳಾಲ, ಜು 14 (Daijiworld News/SM): ಲಾರಿ ಕಂಟೈನರ್ ನಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದ 22 ಎಮ್ಮೆ ಮತ್ತು ಕೋಣಗಳನ್ನು ಉಳ್ಳಾಲ ಠಾಣಾ ಪೊಲೀಸರು ಭಾನುವಾರ ನಸುಕಿನ ಜಾವ ತಲಪಾಡಿ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಹಾಸನ ನಿವಾಸಿ ಚಿಂದೇಗೌಡ, ಕಾಸರಗೋಡು ನಿವಾಸಿ ರವೀಂದ್ರನ್ ಮತ್ತು ಮಹಮ್ಮದ್ ಫಾರೂಕ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ಘಟ್ಟದ ಭಾಗದಿಂದ ಜಾನುವಾರುಗಳನ್ನು ಕಳವು ನಡೆಸಿ, ಅಕ್ರಮವಾಗಿ ಲಾರಿ ಕಂಟೈನರ್ ನಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಕೇರಳ ಕಡೆಗೆ ಸಾಗಾಟ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ನೇತೃತ್ಬದ ಪೊಲೀಸರ ತಂಡ ತಲಪಾಡಿ ಸಮೀಪ ಪರಿಶೀಲನೆ ನಡೆಸಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪರಾರಿಯಾದ ಆರೋಪಿಗಳಿಗಾಗಿ ಉಳ್ಳಾಲ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.