ಮಂಗಳೂರು, ಜು15(Daijiworld News/SS): ಸುರತ್ಕಲ್ ಎನ್ಐಟಿಕೆ ಟೋಲ್ಗೇಟ್ನಲ್ಲಿ ಸ್ಥಳೀಯ ವಾಹನಗಳಿಗೂ ಸುಂಕ ವಿಧಿಸಲು ಗುತ್ತಿಗೆದಾರರು ಮುಂದಾಗಿರುವುದು ಮತ್ತೆ ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.
ಕೆಲ ತಿಂಗಳ ಮೊದಲು ಇದೇ ರೀತಿ ಗುತ್ತಿಗೆದಾರರಿಗೆ ನಷ್ಟವಾಗುತ್ತದೆ ಎಂಬ ಕಾರಣ ಮುಂದಿಟ್ಟು ಸುಂಕವನ್ನು ಸ್ಥಳೀಯರಿಂದಲೂ ಸಂಗ್ರಹಿಸಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಆಗ ಸಂಸದ ನಳಿನ್ ಕುಮಾರ್ ಸಭೆ ನಡೆಸಿ, ಸುರತ್ಕಲ್ ಟೋಲ್ಗೇಟ್ ರದ್ದು ಅಥವಾ ಬೇರೆ ಟೋಲ್ಗೇಟ್ ಜತೆಗೆ ವಿಲೀನ ಮಾಡಲಾಗುವುದು ಎಂದಿದ್ದರು. ಅಲ್ಲಿಯವರೆಗೂ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದ್ದರು.
ಆದರೆ ಇದುವರೆಗೆ ಯಾವುದೇ ಪ್ರಸ್ತಾಪವೂ ಅಂತಿಮಗೊಂಡಿಲ್ಲ. ಇದರ ನಡುವೆಯೇ ಎನ್ಐಟಿಕೆ ಟೋಲ್ಗೇಟ್ ಗುತ್ತಿಗೆದಾರರು ಸ್ಥಳೀಯರು ಟೋಲ್ ನೀಡದ ಕಾರಣ ತನಗೆ ಭಾರಿ ನಷ್ಟವಾಗುತ್ತಿದೆ. ಹಾಗಾಗಿ ಕಾಂಟ್ರಾಕ್ಟ್ ರದ್ದುಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ಕಚೇರಿಗೆ ಪತ್ರ ಬರೆದಿದ್ದಾರೆ.
ಎನ್ಎಚ್ಎಐ ನಿಯಮಗಳ ಪ್ರಕಾರ ಸ್ಥಳೀಯರಿಂದ ಶುಲ್ಕ ಪಡೆಯಬಾರದು ಎಂಬ ಯಾವುದೇ ಸೆಕ್ಷನ್ ಇಲ್ಲ. ಹಾಗಾಗಿ ಅದರಂತೆಯೇ ಶುಲ್ಕ ಪಡೆಯಬಹುದು ಎನ್ನುವುದು ಗುತ್ತಿಗೆದಾರರ ವಾದ. ಪೊಲೀಸ್ ನೆರವಿನೊಂದಿಗೆ ಜು.16ರಿಂದ ಸ್ಥಳೀಯ (ಕೆಎ 19 ನೋಂದಣಿ) ವಾಹನಗಳಿಂದಲೂ ಟೋಲ್ ಪಡೆಯುವುದಾಗಿ ತಿಳಿಸಿದ್ದಾರೆ.
ಟೋಲ್ ವಸೂಲಿ ಮಾಡಿದರೆ ಹೋರಾಟದ ಎಚ್ಚರಿಕೆ
ಸುರತ್ಕಲ್ ಟೋಲ್'ಗೇಟ್ ನಲ್ಲಿ ಸ್ಥಳೀಯ ಖಾಸಗೀ ವಾಹನಗಳಿಗೂ ಟೋಲ್ ಪಡೆಯುವುದನ್ನು ಬಿಜೆಪಿ ವಿರೋಧಿಸುತ್ತದೆ. ಮಾತ್ರವಲ್ಲ ,ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಾ.ಭರತ್ ಶೆಟ್ಟಿ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಂಗಳೂರು ನಗರ ಉತ್ತರ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಅಶೋಕ್ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಗುತ್ತಿಗೆ ವಹಿಸಿಕೊಂಡ ಕಂಪನಿ ನಷ್ಟವಾಗುತ್ತಿದೆ ಎನ್ನುವುದು ಸಾರ್ವಜನಿಕರನ್ನು, ಅಧಿಕಾರಿಗಳನ್ನು ದಾರಿ ತಪ್ಪಿಸುವ ತಂತ್ರವಾಗಿದೆ. ಗುತ್ತಿಗೆ ಹಾಕುವ ಸಂದರ್ಭ ಕಂಪನಿ ಸ್ಥಳೀಯ ಖಾಸಗಿ ವಾಹನವನ್ನು ಬಿಟ್ಟು ಮಾಹಿತಿ ಬಿಡ್ ಸಲ್ಲಿಸುತ್ತದೆ. ಇದೀಗ ನಷ್ಟ ಎಂದರೆ ಸಾರ್ವಜನಿಕರು ಹೊಣೆಯಲ್ಲ. ಈ ಹಿಂದೆ ಇದ್ದಂತೆಯೇ ಜಿಲ್ಲಾಡಳಿತ ಸ್ಥಳೀಯ ಖಾಸಗಿ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಸ್ಥಳೀಯರ, ಪಕ್ಷದ ಆಗ್ರಹಕ್ಕೆ ಹೆದ್ದಾರಿ ಇಲಾಖೆ, ಜಿಲ್ಲಾಡಳಿತ ಮಣಿಯದಿದ್ದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಮಂಗಳೂರು ನಗರ ಉತ್ತರ, ಮೂಲ್ಕಿ ಮೂಡುಬಿದಿರೆ, ಬಿಜೆಪಿ ಘಟಕ ಈ ಹೋರಾಟವನ್ನು ಹಮ್ಮಿಕೊಳ್ಳಲಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜು.15ರಂದು ಸಂಜೆ 6.30ಕ್ಕೆ ಸುರತ್ಕಲ್ ಜಂಕ್ಷನ್'ನಲ್ಲಿ ಜಾಗೃತಿ ಸಭೆ, ಜು.16 ರಂದು ಟೋಲ್ ಗೇಟ್ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.