ಉಡುಪಿ, ಜು15(Daijiworld News/SS): ಮಳೆಗಾಲ ಆರಂಭವಾಯಿತೆಂದರೆ ಕರಾವಳಿಯಲ್ಲಿ ನಾಡದೋಣಿಗಳು ನೀರಿಗಿಳಿಯುತ್ತವೆ. ಆದರೆ ಈ ಬಾರಿ ಪರಿಸ್ಥಿತಿ ನಾಡದೋಣಿ ಮೀನುಗಾರರ ಕೈ ಹಿಡಿದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಆಳ ಸಮುದ್ರ ಮೀನುಗಾರಿಕಾ ಅವಧಿ ಆರಂಭಗೊಳ್ಳಲಿದೆ. ಈ ನಡುವೆ ಗಳಿಕೆಯ ಕನಸು ಕಂಡಿದ್ದ ನಾಡ ದೋಣಿ ಮೀನುಗಾರರು ನಿರಾಸೆ ಅನುಭವಿಸುತ್ತಿದ್ದಾರೆ.
ಯಾಂತ್ರೀಕೃತ ಮೀನುಗಾರಿಕೆ ಅವಧಿ ಮುಗಿಯುತ್ತಿದ್ದಂತೆ ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಪದ್ಧತಿ ಆರಂಭಗೊಳ್ಳುತ್ತದೆ. ಆದರೆ ಈ ಬಾರಿ ಉತ್ತಮ ಮೀನುಗಾರಿಕೆ ನಡೆಯಬಹುದೆಂಬ ನಿರೀಕ್ಷೆಗೆ ಪ್ರತಿಕೂಲ ಹವಾಮಾನ ತಣ್ಣೀರೆರಚಿದೆ. ಉಡುಪಿಯ ಮಲ್ಪೆ, ಕಾಪು, ಉಚ್ಚಿಲ, ಮಟ್ಟು, ಪಡುಕರೆ, ತೊಟ್ಟಂ, ಹೂಡೆ ಬೆಂಗ್ರೆ ಮುಂತಾದೆಡೆಗಳಲ್ಲಿ ನಾಡದೋಣಿ ಮೀನುಗಾರಿಕೆ ಹರಡಿಕೊಂಡಿದೆ. ಪ್ರತಿನಿತ್ಯ ಬೆಳಗ್ಗೆ ಮೀನುಗಾರಿಕೆಗೆ ತೆರಳುವ ಅವರು ಅದೇ ದಿನ ಸಂಜೆ ವಾಪಸಾಗುತ್ತಾರೆ. ಆದರೆ ಬಹುತೇಕ ಕಡೆಗಳಲ್ಲಿ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ಇನ್ನೂ ಸರಿಯಾಗಿ ಆರಂಭಗೊಂಡಿಲ್ಲ.
ಬೆರಳೆಣಿಕೆಯ ದೋಣಿಗಳಿಗೆ ಚಿಲ್ಲರೆ ಮೀನು ಸಿಕ್ಕಿದರೂ ಲಾಭಕ್ಕಿಂತ ನಷ್ಟದ ಪ್ರಮಾಣವೇ ಜಾಸ್ತಿಯಾಗಿದೆ. ಬಹುತೇಕ ಮೀನುಗಾರರು ಬರಿಗೈಯಲ್ಲಿ ವಾಪಾಸಾಗಿದ್ದಾರೆ. ಯಾಂತ್ರಿಕ ಮೀನುಗಾರಿಕೆಯ ನಿಷೇಧದ ಅವಧಿಯೂ ಮುಗಿಯುತ್ತಾ ಬರುತ್ತಿದೆ. ಹೆಜಮಾಡಿ, ಉಚ್ಚಿಲ, ಕಾಪು ಗಂಗೊಳ್ಳಿ ಕೋಡಿ ಮತ್ತಿತರ ಕಡೆಗಳಲ್ಲಿಯೂ ಕೂಡ ಮೀನುಗಾರಿಕೆ ಸರಿಯಾಗಿ ನಡೆದಿಲ್ಲ ಎಂದು ತಿಳಿದುಬಂದಿದೆ.
ಕೆಲವು ಕಡೆ ಕೆಲವೊಂದು ನಾಡದೋಣಿಗಳು ಸಮುದ್ರಕ್ಕೆ ಇಳಿದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ಸಿಕ್ಕಿಲ್ಲ. ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಜು.13 ಮತ್ತು 14ರಂದು ಸುಮಾರು 20ರಷ್ಟು ನಾಡದೋಣಿಗಳು ತೆರಳಿವೆ. ಸುಮಾರು 3-4 ದೋಣಿಗಳಿಗೆ 10-15 ಬುಟ್ಟಿಯಷ್ಟು ಸೋಡಿ ಮೀನು ದೊರಕಿದೆ. ಇದು ದಿನದ ಖರ್ಚಿಗೂ ಸಾಕಾಗುತ್ತಿಲ್ಲ ಎಂದು ಮೀನುಗಾರರು ಅಳಲು ತೋರಿಸಿದ್ದಾರೆ.
ಮಳೆಯಾಗದಿದ್ದರೆ ಮೀನು ಸಿಗುವುದು ಕಷ್ಟ. ಮಳೆ ಕೊರೆತೆಯಾಗಿದ್ದು ಒಂದೂ ನೆರೆ ಬಾರದ ಕಾರಣ ಸಿಹಿನೀರು ಕಡಲಿಗೆ ಸೇರಿಲ್ಲ. ಇದೇ ಕಾರಣ ಮೀನುಗಳು ತೀರ ಪ್ರದೇಶಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ.
ಕಳೆದ ಎರಡು ಮೂರು ತಿಂಗಳ ಹಿಂದೆ ಸಮುದ್ರತೀರದಲ್ಲಿ ಕಪ್ಪು ಬಣ್ಣದ ತೈಲ ಮಿಶ್ರಿತ ಜಿಡ್ಡಿನ ಪ್ರಮಾಣ ತೀರ ಪ್ರದೇಶವನ್ನು ಸೇರುತ್ತಿತ್ತು. ಸಮುದ್ರ ಮಧ್ಯೆ ಹಡಗುಗಳಿಂದ ಕಚ್ಚಾ ತೈಲದ ವಿಲೇವಾರಿಯಿಂದಾಗಿ ಅದು ಸಮುದ್ರ ತೀರವನ್ನು ಸೇರುತ್ತಿದೆ ಎನ್ನಲಾಗುತ್ತಿದ್ದು, ಇದು ಎರಡು ಮೂರು ಸಲ ಪುನರಾವರ್ತನೆಯಾಗಿತ್ತು. ಇದು ಜಲಚರ ನಾಶಕ್ಕೆ ಕಾರಣವಾಗಿರಬಹುದೆಂದು ಮೀನುಗಾರರು ನೊಂದುಕೊಂಡಿದ್ದಾರೆ.
ಕರಾವಳಿಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಭಾರಿ ಹಿನ್ನೆಡೆಯಾಗಿದ್ದರಿಂದ ಮೀನುಗಾರರು ದೇವರಿಗೆ ಮೊರೆ ಹೋಗಿದ್ದಾರೆ. ಕಲ್ಮಾಡಿ ಬೊಬ್ಬರ್ಯ ದೈವಸ್ಥಾನದಲ್ಲಿ ದರ್ಶನ ಸೇವೆ ನಡೆಸಿದ್ದಾರೆ.