ಮಂಗಳೂರು, ಜು15(Daijiworld News/SS): ಸುರತ್ಕಲ್ ಎನ್ಐಟಿಕೆ ಟೋಲ್ಗೇಟ್ನಲ್ಲಿ ಸ್ಥಳೀಯ ವಾಹನಗಳಿಗೂ ಸುಂಕ ವಿಧಿಸಲು ಗುತ್ತಿಗೆದಾರರು ಮುಂದಾಗಿರುವುದು ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ. ಗುತ್ತಿಗೆದಾರರಿಗೆ ನಷ್ಟವಾಗುತ್ತದೆ ಎಂಬ ಕಾರಣ ಮುಂದಿಟ್ಟು ಸುಂಕವನ್ನು ಸ್ಥಳೀಯರಿಂದಲೂ ಸಂಗ್ರಹಿಸಲು ಎನ್ಐಟಿಕೆ ಟೋಲ್ಗೇಟ್ ಗುತ್ತಿಗೆದಾರರು ತೀರ್ಮಾನಿಸಿದ್ದಾರೆ.
ಈ ಹಿನ್ನಲೆಯಲ್ಲಿ, ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಸ್ಥಳೀಯ ಖಾಸಾಗಿ ವಾಹನಗಳಿಗೆ ಜು.16 ರಿಂದ ಸುಂಕ ವಿಧಿಸುವ ಹೆದ್ದಾರಿ ಪ್ರಾಧಿಕಾರದ ತೀರ್ಮಾನಕ್ಕೆ ತಡೆ ವಿಧಿಸಬೇಕು ಎಂದು ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ಇಂದು ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.
ಟೋಲ್ ಗೇಟನ್ನು ಶಾಶ್ವತವಾಗಿ ಮುಚ್ವುವ ತೀರ್ಮಾನ ಜಾರಿಯಾಗಬೇಕು. ಯಾವುದೇ ಕಾರಣಕ್ಕೂ ಜು. 16 ರಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಬಾರದು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಬೇಕು. ಅಲ್ಲಿಯವರಗೆ ಯಥಾಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಜನರ ಆಗ್ರಹವನ್ನು ಮೀರಿ ಸುಂಕ ಸಂಗ್ರಹಿಸಲು ಮುಂದಾದರೆ ಸಮಿತಿ ಅದನ್ನು ತಡೆಯಲಿದೆ. ಜು.16 ಬೆಳಗ್ಗೆ 7.30ಕ್ಕೆ ಪಕ್ಷಾತೀತವಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಂಘಟನೆ ಪ್ರಮುಖರು, ನಾಗರಿಕರ ಬೆಂಬಲದೊಂದಿಗೆ ಟೋಲ್ ಗೇಟ್ ಮುಂಭಾಗ ಸೇರಲಿದ್ದು, ಟೋಲ್ ಸಂಗ್ರಹಕ್ಕೆ ಮುಂದಾದರೆ ಸಾಮೂಹಿಕವಾಗಿ ತಡೆಯಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಮ್ಮ ಬೇಡಿಕೆಗಳನ್ನು ಆಲಿಸಿ ಈ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯ ಜೊತೆಗೆ ಚರ್ಚಿಸಿ ಪರಿಹಾರಕ್ಕೆ ಯತ್ನಿಸುವುದಾಗಿ ತಿಳಿಸಿದರು.