ಮಂಗಳೂರು, ಜು 15 (DaijiworldNews/SM): ಕುದ್ರೋಳಿಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಕರೆ ತರುತ್ತಿದ್ದ ವೇಳೆ ಮೂತ್ರ ವಿಸರ್ಜನೆ ನಡೆಸುವ ಹೆಸರಿನಲ್ಲಿ ವಾಹನದಿಂದ ಇಳಿದ ಆರೋಪಿಯೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ನದಿಗೆ ಹಾರಿರುವ ಘಟನೆ ಮಂಗಳೂರಿನ ಕೂಳೂರಿನಲ್ಲಿ ನಡೆದಿದೆ.
ಮುನೀರ್ ಪ್ರಕರಣದ ಆರೋಪಿಯಾಗಿದ್ದು, ನದಿಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕುದ್ರೋಳಿ ನಿವಾಸಿಯಾಗಿರುವ ಮುನೀರ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆತನ ವಿರುದ್ಧ ಬಂದರು ಠಾಣೆಗೆ ಪತ್ನಿ ದೂರು ನೀಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಮನೀರ್ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಮನೆ ಬಿಟ್ಟು ಪರಾರಿಯಾಗುತ್ತಿದ್ದ ಆರೋಪಿಯನ್ನು ಹಳೆಯಂಗಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ. ಬಳಿಕ ಪೊಲೀಸರು ಆರೋಪಿಯನ್ನು ಕರೆತರುತ್ತಿದ್ದ ವೇಳೆ ಕೂಳೂರು ಸಮೀಪ ಮೂತ್ರ ವಿಸರ್ಜನೆ ಹೆಸರಿನಲ್ಲಿ ವಾಹನದಿಂದ ಇಳಿದಿದ್ದಾನೆ. ಆದರೆ, ಮೂತ್ರ ವಿಸರ್ಜನೆಯ ಬದಲು ಸೇತುವೆಯಿಂದ ನದಿಗೆ ಹಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಸದ್ಯ ಆರೋಪಿಗಾಗಿ ಹುಡುಕಾಟ ಮುಂದುವರೆಸಲಾಗಿದೆ.