ಕಾಸರಗೋಡು, ಜು 15 (DaijiworldNews/SM): ಸಾಮಾನ್ಯವಾಗಿ ಕೊರಗ ಸಮುದಾಯ ಅಂದಾಕ್ಷಣ ಸಮಾಜ ಅಂದರೆ ಬುಟ್ಟಿ ಹೆಣೆದು, ಬೀಡಿ ಕಟ್ಟಿ, ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುವವರು ಎನ್ನುವ ಕಾಲವೊಂದಿತ್ತು. ಅಲ್ಲದೆ ಈ ಸಮುದಾಯದವರು ಇತರರೊಂದಿಗೆ ಬೆರೆತುಕೊಂಡು ಜೀವನ ನಡೆಸುವುದು, ಶಿಕ್ಷಣ, ಉದ್ಯೋಗ ಎಲ್ಲವುಗಳಿಂದ ವಂಚಿತರಾಗುತ್ತಿದ್ದರು. ಆದರೆ ಕಾಸರಗೋಡಿನ ವರ್ಕಾಡಿಯ ಬೊಡ್ಡೋಡಿ ಯ ಮೀನಾಕ್ಷಿ ಎಂಬ ಮಹಿಳೆ ಇವುಗಳಿಗೆ ಅಪವಾದ ಎಂಬಂತಿದ್ದಾರೆ. ಉನ್ನತ ಶಿಕ್ಷಣವಾದ ಎಂಫಿಲ್ ಪದವಿ ಪಡೆಯುವ ಮೂಲಕ ಸಮುದಾಯಕ್ಕೆ ಇರುವ ಕೀಳರಿಮೆಯನ್ನು ದೂರ ಮಾಡುವ ಕೆಲಸ ಮಾಡಿದ್ದಾರೆ. ವಿಪರ್ಯಾಸವೆಂದರೆ, ಇಷ್ಟೆಲ್ಲಾ ಶಿಕ್ಷಣ ಪಡೆದ ಬಳಿಕ ಈ ಮಹಿಳೆ ಬದುಕು ಬೀಡಿ ಸುತ್ತುವುದರಲ್ಲೇ ಅವಲಂಬಿಸಿಕೊಂಡಿದೆ.
ಸ್ನಾತಕೋತ್ತರ ಪದವಿ ಪಡೆದ ಕೊರಗ ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮೀನಾಕ್ಷಿ ಪಾತ್ರರಾಗಿದ್ದಾರೆ. ಕೊರಗ ಸಮುದಾಯದ ಭಾಷೆ ಹಾಗೂ ಸಂಸ್ಕೃತಿ ವಿಷಯದಲ್ಲಿ ಎಂಫಿಲ್ ಪದವಿಯನ್ನೂ ಪಡೆದಿದ್ದರು. 2014ರ ಗಣರಾಜ್ಯೋತ್ಸವಕ್ಕೆ ಇವರನ್ನುಯನ್ನು ವಿಶೇಷ ಅತಿಥಿಯಾಗಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಹ್ವಾನಿಸಿದ್ದರು. ಆದರೆ ಈ ಪ್ರತಿಭಾವಂತ ಮಹಿಳೆ ಈಗ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಐದು ವರ್ಷಗಳ ಸೆಲೆಬ್ರಿಟಿಯಂತಿದ್ದ ಮೀನಾಕ್ಷಿ ಇಂದು ಯಾರಿಗೂ ಬೇಡವಾದ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ.
ಮೀನಾಕ್ಷಿಯವರು ವರ್ಕಾಡಿಯ ಬೊಡ್ಡೋಡಿ ಯ ಶೇಖರ್ - ತುಕ್ರು ದಂಪತಿಯ ಪುತ್ರಿಯಾಗಿದ್ದಾರೆ. ಜೀವನದ ಜಂಜಾಟಗಳನ್ನು ಮೆಟ್ಟಿ ನಿಂತ ಇವರು, ಸಾಕಷ್ಟು ಕಷ್ಟಗಳು ಎದುರಾದಗ ಎದೆಗುಂದದೆ ದೈರ್ಯದಿಂದ ಎದುರಿಸಿದ ಫಲವಾಗಿ ಉನ್ನತ ಶಿಕ್ಷಣ ಪಡೆಯಲು ಶಕ್ತರಾದರು. ಅಲ್ಲದೆ ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದರು. ಕೂಲಿ ಕೆಲಸ ನಿರ್ವಹಿಸಿ ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸಿ ಶಿಕ್ಷಣಕ್ಕೆ ತಂದೆ ನೀಡಿದ ಪ್ರೋತ್ಸಾಹ ಹಾಗೂ ಗುರುಗಳ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಯಿತು ಎನ್ನುವುದಾಗಿ ಮೀನಾಕ್ಷಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿರುವ ಕೊರಗ ಸಮುದಾಯದ ಮಂದಿ ಮಾತನಾಡುವ ತುಳು ಉಪಭಾಷೆಯ ಅಪರೂಪದ ಶಬ್ದಗಳ ಸಂಗ್ರಹ ಮತ್ತು ಕೊರಗರ ಸಾಂಸ್ಕತಿಕ ಬದುಕಿನ ಚಿತ್ರಣ ಇವರ ಸಂಶೋಧನಾ ಪ್ರಬಂಧದಲ್ಲಿದೆ. ಎಂ.ಎ ಕನ್ನಡ ತೇರ್ಗಡೆ ಹೊಂದಿದ ವರ್ಷದಲ್ಲಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ ಸತ್ಕಾರ ಕೂಟದಲ್ಲಿ ಭಾಗವಹಿಸುವ ಅವಕಾಶವನ್ನು ಮೀನಾಕ್ಷಿಯವರು ಪಡೆದಿದ್ದರು. ಪ್ರಸ್ತುತ ಸರಕಾರಿ ಉದ್ಯೋಗವನ್ನು ಪಡೆಯುವ ಗುರಿಯನ್ನು ಮೀನಾಕ್ಷಿ ಬಡ್ಡೋಡಿ ಹೊಂದಿದ್ದಾರೆ.
ಇಷ್ಟೆಲ್ಲ ಸಾಧನೆಗೈದಿರುವ ಮೀನಾಕ್ಷಿಯವರಿಗೆ ಉದ್ಯೋಗ ಕಲ್ಪಿಸುವಲ್ಲಿ ಜನನಾಯಕರು, ಅಧಿಕಾರಿ ವರ್ಗದವರು ಎಡವಿದ್ದಾರೆ. ಅಪರೂಪದಲ್ಲಿ ಅಪರೂಪ ಎಂಬಂತೆ ಕೊರಗ ಸಮುದಾಯದಲ್ಲಿ ಅರಳಿದ ಈ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಸರಕಾರ ಕಲ್ಪಿಸಿ ಒಂದು ಉತ್ತಮ ಉದ್ಯೋಗವನ್ನು ನೀಡಬೇಕಾದ ಅನಿವಾರ್ಯತೆ ಇದೆ.