ಮಂಗಳೂರು, ಜು16(Daijiworld News/SS): ಜುಲೈ 16ರಂದು ಖಂಡಗ್ರಾಸ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆ. ರಾತ್ರಿ 1.33ರಿಂದ ಮುಂಜಾವಿನ 4.32ರವರೆಗೆ ಚಂದ್ರಗ್ರಹಣ ನಡೆಯುವ ಹಿನ್ನೆಲೆಯಲ್ಲಿ ಕರಾವಳಿಯ ದೇವಾಲಯಗಳ ಪೂಜಾ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕರಾವಳಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಕಟೀಲಿನಲ್ಲಿ ಚಂದ್ರಗ್ರಹಣದ ಹಿನ್ನೆಲೆ ರಾತ್ರಿ ಹೂವಿನ ಪೂಜೆ, ರಂಗಪೂಜೆ ಸೇರಿದಂತೆ ಇತರ ಯಾವುದೇ ವಿಶೇಷ ಸೇವೆಗಳು ನಡೆಯುವುದಿಲ್ಲ ಎನ್ನಲಾಗಿದೆ. ಮಾತ್ರವಲ್ಲ, ರಾತ್ರಿ ಅನ್ನದಾನ ಇರುವುದಿಲ್ಲ. ದೇವಾಲಯದಲ್ಲಿ ಮಹಾಪೂಜೆ ಎಂದಿನಂತೆ ರಾತ್ರಿ 8 ಗಂಟೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಳೆ ರಾತ್ರಿ 7ಕ್ಕೆ ನಡೆಯುವ ಮಹಾಪೂಜೆ ಸಂಜೆ 6.30ಕ್ಕೆ ನಡೆಯಲಿದೆ. 7 ಗಂಟೆ ಬಳಿಕ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ. ಸಂಜೆಯ ಆಶ್ಲೇಷಾ ಬಲಿ ಸೇವೆ ಹಾಗೂ ರಾತ್ರಿಯ ಭೋಜನ ವ್ಯವಸ್ಥೆಯೂ ಇರುವುದಿಲ್ಲ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೆಳಗ್ಗಿನಿಂದ ಮಧ್ಯಾಹದವರೆಗಿನ ಪೂಜಾ ಅವಧಿ ಮತ್ತು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗಿದೆ.
ಉಡುಪಿ ಶ್ರೀಕೃಷ್ಣ ಮಠ, ಅನಂತೇಶ್ವರ ಹಾಗೂ ಚಂದ್ರಮೌಳೇಶ್ವರ ದೇವಸ್ಥಾನಗಳು ಆ ಹೊತ್ತಿನಲ್ಲಿಯೂ ತೆರೆದಿರಲಿವೆ. ಗ್ರಹಣದ ವೇಳೆ ಜಪ, ಸ್ತೋತ್ರ ಪಠಣ ಇತ್ಯಾದಿ ನಿರಂತರವಾಗಿ ನಡೆಯಲಿವೆ. ಗ್ರಹಣ ಮೋಕ್ಷದ ಬಳಿಕ ಅಭಿಷೇಕ, ಪೂಜೆ ನೆರವೇರಲಿದೆ ಎನ್ನಲಾಗಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಗ್ರಹಣ ಕಾಲದಲ್ಲಿ ದೇವರಿಗೆ ಶತರುದ್ರಾಭಿಷೇಕ ನಡೆಯಲಿದೆ. ರಾತ್ರಿ ಮಹಾಪೂಜೆ ಎಂದಿನಂತೆ 9 ಗಂಟೆಗೆ ನಡೆಯಲಿದೆ. ಗ್ರಹಣಕಾಲದಲ್ಲೂ ದೇವರದರ್ಶನಕ್ಕೆ ಭಕ್ತರಿಗೆ ಅವಕಾಶವಿದೆ.
ಚಂದ್ರಗ್ರಹಣ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಪೂಜೆ ಮತ್ತು ದೇವರ ದರ್ಶನ ಇರುತ್ತದೆ. ಚಂದ್ರಗ್ರಹಣ ಮಧ್ಯರಾತ್ರಿ ಆಗುವುದರಿಂದ ರಾತ್ರಿ 9 ಗಂಟೆ ತನಕವೂ ಅನ್ನಛತ್ರದಲ್ಲಿ ಎಂದಿನಂತೆ ಅನ್ನ ದಾಸೋಹವಿರಲಿದೆ.