ಬೆಳ್ತಂಗಡಿ, ಜು 16(Daijiworld News/MSP): ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಗೋದಾಮಿನಿಂದ ಶ್ರೀಗಂಧ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ.
ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಾಟೂಲ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಲನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಅವರು ಕಳವಾಗಿರುವ ಗೋದಾಮಿಗೆ ಭೇಟಿ ಸ್ಥಳ ಪರಿಶೀಲನೆ ನಡೆಸಿದರು, ಇಲ್ಲಿನ ಸ್ಥಳೀಯ ಅಧಿಕಾರಿಗಳ, ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಿದರಲ್ಲದೆ, ಕರ್ತವ್ಯದ ಕುರಿತು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಗೋದಾಮಿಗೆ ಭೇಟಿ ನೀಡಿದ ಬಳಿಕ ಇಲ್ಲಿನ ಕಚೇರಿಯಲ್ಲೂ ಪ್ರತಿಯೊಬ್ಬರಿಂದಲೂ ಮತ್ತೆ ಮಾಹಿತಿ ಸಂಗ್ರಹಿಸಿದ್ದಾರೆ. ವಿವಿಧ ವಲಯಗಳಲ್ಲಿ ತನಿಖೆ ನಡೆಸುವಂತೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯವರಿಗೆ ಆದೇಶಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಪೊಲೀಸ್ ತನಿಖೆಗೆ ಸಹಕರಿಸುವಂತೆ ಸಿಬಂದಿಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಗೋದಾಮಿನಿಂದ 8.60 ಲಕ್ಷ ರೂ. ಮೌಲ್ಯದ 344ಕೆ.ಜಿ. ಶ್ರೀಗಂಧ ಕಳವಿಗೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.