ಮಂಗಳೂರು, ಜು16(Daijiworld News/SS): ನಗರದಲ್ಲಿ ಗಾಂಜಾ ಮತ್ತಿತರ ಮಾದಕ ದ್ರವ್ಯ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಸಲುವಾಗಿ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ನಗರದಲ್ಲಿರುವ ಹಲವು ಪಿ.ಜಿ.ಗಳಿಗೆ ಇಂದು ಬೆಳಗ್ಗೆ ಪೊಲೀಸರು ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ದಾಳಿಯ ವೇಳೆ ಯಾವುದೇ ಮಾದಕ ದ್ರವ್ಯಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ವಿಸ್ತರಣೆಯಾಗುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿದೆ. ಯುವಜನರ ಭವಿಷ್ಯವನ್ನೇ ಕಿತ್ತುಕೊಳ್ಳುತ್ತಿರುವ ಈ ಪಿಡುಗನ್ನು ಮಟ್ಟ ಹಾಕುವ ಬಗ್ಗೆ ಸಾರ್ವಜನಿಕರು ಇಲಾಖೆಗಳಿಗೆ ಮನವಿ ಮಾಡುತ್ತಲೇ ಇದ್ದಾರೆ. ಈ ಹಿನ್ನಲೆಯಲ್ಲಿ, ಮಾದಕ ವ್ಯಸನವನ್ನು ನಿಯಂತ್ರಿಸಲು ಇದರ ಹಿಂದಿರುವ ಮಾರಾಟದ ಜಾಲವನ್ನು ಪತ್ತೆ ಹಚ್ಚಿ ಮಟ್ಟ ಹಾಕಲು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಮಾತ್ರವಲ್ಲ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಸಲುವಾಗಿ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.