ಉಳ್ಳಾಲ,ಡಿ 13: ಮೀನಿನ ಲಾರಿ , ಬೈಕ್ನ್ನು ಪುಡಿಗೈದಿರುವ 20-25 ದುಷ್ಕರ್ಮಿಗಳಿದ್ದ ತಂಡವೊಂದು ಕ್ಲಬ್ ಕಟ್ಟಡದ ಕಿಟಕಿ ಗಾಜುಗಳನ್ನು ಪುಡಿಗೈದು ಮನೆಯ ಹಂಚಿಗೆ ಕಲ್ಲೆಸೆದು ದಾಂಧಲೆ ನಡೆಸಿರುವ ಘಟನೆ ಉಳ್ಳಾಲದ ಕೋಟೆಪುರದಲ್ಲಿ ಡಿ 10 ರ ಭಾನುವಾರ ತಡರಾತ್ರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೋಟೆಪುರ ಎಂಬಲ್ಲಿರುವ ಸುಲ್ತಾನ್ ಸ್ಟೋನ್ಸ್ ಆಂಡ್ ಕಲ್ಚರಲ್ ಕ್ಲಬ್ ಕಟ್ಟಡದ ಎಲ್ಲಾ ಗಾಜುಗಳನ್ನು ತಂಡ ಪುಡಿಗೈದಿರುವುದಲ್ಲದೆ, ಸ್ಥಳದಲ್ಲೇ ನಿಲ್ಲಿಸಲಾಗಿದ್ದ ಮೀನಿನ ಲಾರಿಯ ಗಾಜು ಪುಡಿಗೈದು, ಬೈಕನ್ನು ಸಂಪೂರ್ಣ ಹಾನಿಗೈದು , ಫಾರುಕ್ ಎಂಬವರಿಗೆ ಸೇರಿದ ಮನೆಯ ಹಂಚಿಗೆ ಕಲ್ಲೆಸೆದು , ಬಸ್ಸು ನಿಲ್ದಾಣದ ನಾಮಫಲಕಕ್ಕೆ ಹಾನಿಗೊಳಿಸಿ ದಾಂಧಲೆ ನಡೆಸಿದ್ದಾರೆ. ತಂಡದಲ್ಲಿದ್ದ ಯುವಕರೆಲ್ಲರೂ ಕೋಡಿ ನಿವಾಸಿಗಳಾಗಿದ್ದು, ಈ ಪೈಕಿ ಅಜೀಮ್, ಅರ್ಷಾದ್, ತೌಸೀಫ್, ಅನೀಸ್, ಚಪ್ಪಾ, ರಿಜ್ವಾನ್, ನಿಝಾಂ, ನೌಷಾದ್, ನೌಫಾಲ್, ತೌಸೀಫ್, ಬದ್ರು, ಅಶ್ಫಾಕ್, ಇಮ್ರಾನ್ ಎಂಬವರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೈಯಕ್ತಿಕ ಕಾರಣಕ್ಕೆ ಸಂಬಂಧಿಸಿ ಇಬ್ಬರು ಯುವಕರ ಮಧ್ಯೆ ಹೊಡೆದಾಟ ನಡೆದಿತ್ತು. ಇದನ್ನೇ ಕಾರಣವಾಗಿಸಿಕೊಂಡ ತಂಡ ದಾಂಧಲೆ ನಡೆಸಿದೆ ಎನ್ನಲಾಗಿದೆ.
ಗಾಂಜಾ ನೆರಳು : ಮಾದಕ ವ್ಯಸನ ಸೇವಿಸದೆ ತಂಡ ದುಷ್ಕೃತ್ಯ ಎಸಗಲು ಸಾಧ್ಯವಿಲ್ಲ ಅನ್ನುವ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ. ಮುಕ್ಕಚ್ಚೇರಿ ನಿವಾಸಿ ಜುಬೈರ್ ಹತ್ಯೆ ನಂತರ ಜಿಲ್ಲೆಯಾದ್ಯಂತ ರೌಡಿ ನಿಗ್ರಹ ದಳ ಗಾಂಜಾ ವ್ಯಸನಿಗಳನ್ನು, ಮಾರಾಟಗಾರರನ್ನು, ಬೆಳೆಸುವವರನ್ನು ಪತ್ತೆಹಚ್ಚುತ್ತಿದ್ದರೆ, ಉಳ್ಳಾಲ ಭಾಗದಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗುತ್ತಿಲ್ಲ ಅನ್ನುವ ಆರೋಪಗಳು ಕೇಳಿಬಂದಿವೆ. ಅಹಿತಕರ ಘಟನೆಗಳು ಸಂಭವಿಸುವ ಉಳ್ಳಾಲ ಪ್ರದೇಶದಲ್ಲಿ ಪೊಲೀಸರು ಮಾದಕ ವ್ಯಸನಿಗಳನ್ನು ಹತ್ತಿಕ್ಕಲು ಅಸಾಧ್ಯವಾದ ಹಿನ್ನೆಲೆಯಲ್ಲಿ ದುಷ್ಕೃತ್ಯಗಳು ಮುಂದುವರಿಯುತ್ತಿವೆ ಅನ್ನುವ ಆರೋಪಗಳು ವ್ಯಕ್ತವಾಗಿದೆ. ಡಿ.10 ರ ತಡರಾತ್ರಿ ಘಟನೆ ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದರೂ, ಪೊಲೀಸರು ಮಾತ್ರ ಈವರೆಗೆ ಆರೋಪಿಗಳನ್ನು ಬಂಧಿಸದಿರುವುದು ಸಾರ್ವಜನಿಕ ವಲಯದಲ್ಲಿ ಆತಂಕವನ್ನು ಸೃಷ್ಟಿಸಿದೆ.