ಉಳ್ಳಾಲ, ಜ. 11 (DaijiworldNews/TA): ತುಳು ಭಾಷೆ ರಾಜ್ಯದ ಎರಡನೇ ಭಾಷೆಯಾಗದೆ ಎಂಟನೇ ಪರಿಛೇದಕ್ಕೆ ಸೇರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ತುಳು ಭಾಷೆ ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಕಂಬಳದಂತಹ ಜನಪದ ಸಂಸ್ಕೃತಿ ಉದ್ಧೀಪನ ಕಾರ್ಯಕ್ರಮ ಸಂಘಟನೆಯೊಂದಿಗೆ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಸೇರಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟಿನಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಯತ್ನಿಸಲಿ ಎಂದು ಶ್ರೀಕ್ಷೇತ್ರ ಒಡಿಯೂರು ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಬೋಳದಲ್ಲಿ ಶನಿವಾರ ನಡೆದ ನಾಲ್ಕನೇ ವರ್ಷದ "ಲವ-ಕುಶ ನರಿಂಗಾನ ಕಂಬಳ ಉತ್ಸವ"ವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಮಾತನಾಡಿ, ಕರಾವಳಿ ಕರ್ನಾಟಕವು ರಾಜ್ಯ, ದೇಶ ಮಾತ್ರವಲ್ಲದೆ ಪ್ರಪಂಚದಲ್ಲೇ ವಿಶೇಷ ಸ್ಥಾನಮಾನ ಪಡೆದಿದೆ. ಸುಮಾರು ಎರಡು ಸಾವಿರ ವರುಷ ಇತಿಹಾಸವುಳ್ಳ ತುಳು ಭಾಷೆ, ಯಕ್ಷಗಾನ, ಜನಪದೀಯವಾದ ನಾಗಾರಾಧನೆ, ದೈವಾರಾಧನೆ ಮತ್ತು ಕಂಬಳವನ್ನು ಹೊರತು ಪಡಿಸಿದ ಕರಾವಳಿ ಕರ್ನಾಟಕವನ್ನು ಊಹಿಸಲೂ ಸಾಧ್ಯವಿಲ್ಲ ಎಂದರು.
ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್, ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ, ಕಂಬಳದ ಹಿರಿಯ ವಿಶ್ಲೇಷಕ ಗುಣಪಾಲ ಕಡಂಬ, ಬೋಳ ಚರ್ಚ್ ನ ಧರ್ಮಗುರು ಪೀಟರ್ ಸಲ್ದಾನ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನವಾಝ್, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.