ಕುಂದಾಪುರ ಡಿ 13: ಶಿಕ್ಷಕಿಯೋರ್ವ ವಿದ್ಯಾರ್ಥಿಗಳನ್ನ ಪ್ರೀತಿಸಿದರೆ ವಿದ್ಯಾರ್ಥಿಗಳು ಆ ಶಿಕ್ಷಕಿಯನ್ನ ಎಷ್ಟು ಇಷ್ಟಪಡುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಗುರು ಶಿಷ್ಯ ಸಂಬಂಧಕ್ಕೆ ಉತ್ತಮ ಉದಾಹರಣೆ ಎಂದರೂ ತಪ್ಪಲ್ಲ. ಉಡುಪಿ ತಾಲೂಕಿನ ವಡ್ಡರ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೋರ್ವರು ನಿಯೋಜನೆ ಮೇಲೆ ಬೇರೆಡೆಗೆ ತೆರಳುತ್ತಿರುವ ಸಂದರ್ಭ ಶಿಕ್ಷಕಿ ತೆರಳುತ್ತಿದ್ದ ಕಾರನ್ನ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಡಿ .13 ರ ಬುಧವಾರ ನಡೆದಿದೆ.
ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಲಿನಿ ಎಂಬ ಶಿಕ್ಷಕಿ, ವಿಶೇಷ ಚೇತನ ಮಕ್ಕಳಿಗೆ ತರಬೇತಿ ನೀಡಲೆಂದು ಜೂನ್ ೮ರಂದು ನಡೆದ ಸರ್ಕಾರಿ ಕೌನ್ಸೆಲಿಂಗ್ನಲ್ಲಿ ನಿಯೋಜನೆಗೊಂಡಿದ್ದರು. ಆದರೆ ಇವರಿಗೆ ವಿದ್ಯಾರ್ಥಿಗಳ ಮತ್ತು ಪೋಷಕರ ಒತ್ತಡದ ಹಿನ್ನೆಲೆ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಬುಧವಾರ ಕಡ್ಡಾಯವಾಗಿ ತೆರಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಆದೇಶ ಬಂದ ಹಿನ್ನೆಲೆ, ಮುಖ್ಯೋಪಾಧ್ಯಾಯರಿಂದ ಬಿಡುಗಡೆ ಪತ್ರವನ್ನ ಪಡೆದುಕೊಂಡ ಇವರು, ವಿಕಲಚೇತನ ಮಕ್ಕಳಿಗೆ ಭಾಷಾ ಕೌಶಲ್ಯ ವಿಚಾರವಾಗಿ ಸಂಪನ್ಮೂಲ ವ್ಯಕ್ತಿಯಾಗಿರುವ ಹಿನ್ನೆಲೆ ಅಲ್ಲಿ ತರಬೇತಿ ನೀಡಲೇಂದು ಕಾರಿನಲ್ಲಿ ಹೊರಟಿದ್ದರು. ಶಾಲಿನಿ ಟೀಚರ್ ಶಾಲೆಯಿಂದ ಹೋಗುತ್ತಿದ್ದಾರೆ ಎಂಬ ವಿಚಾರ ತಿಳಿದ ವಿದ್ಯಾರ್ಥಿಗಳು ಏಕಾಏಕಿ ಕಾರಿಗೆ ಅಡ್ಡಬಂದು ಶಾಲೆಯ ಗೇಟಿಗೆ ಬಾಗಿಲು ಹಾಕಿ ಎಂದು ಪ್ರತಿಭಟನೆ ನಡೆಸಿದ್ದಾರೆ.
ಶಿಕ್ಷಕಿ ಶಾಲಿನಿ, ವಡ್ಡರ್ಸೆ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಬೇರೆಡೆಗೆ ತೆರಳುತ್ತಿರುವುದನ್ನ ಖಂಡಿಸಿ ಅವರು ಹೋಗಬಾರದು ಎಂದು ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಶಿಕ್ಷಕಿಗಾಗಿ ಶಾಲೆಯಲ್ಲಿ ಮಕ್ಕಳು ಪ್ರತಿಭಟನೆ ನಡೆಸುತ್ತಿರುವುದನ್ನ ಕಂಡು ಪೋಷಕರು ಮತ್ತು ನಾಗರೀಕರು ಎಸ್ಡಿಎಂಸಿ ಸದಸ್ಯರು ತಕ್ಷಣ ಶಾಲೆ ಕಡೆಗೆ ದೌಡಾಯಿಸಿದರು. ಸುಮಾರು ಎರಡು ಗಂಟೆಗಳ ಕಾಲ ತಡೆಯೊಡ್ಡಿದ ಮಕ್ಕಳು ಬಿಇಓ ಕಚೇರಿಯಿಂದ ಸದ್ಯಕ್ಕೆ ಅವರ ನಿಯೋಜನೆಯನ್ನ ಈ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ತಡೆ ಹಿಡಿಯಲಾಗಿದೆ ಮೌಖಿಕ ಸೂಚನೆ ಬಂದ ಹಿನ್ನೆಲೆ ಮಕ್ಕಳು ಕುಣಿದು ಕುಪ್ಪಳಿಸಿದರು. ಶಾಲಿನಿ ಟೀಚರ್ ಬಂದ್ರು.. ಶಾಲಿನಿ ಟೀಚರ್ ಬಂದ್ರು ಎಂಬ ಮಕ್ಕಳ ಕೂಗು ಅಲ್ಲಿದ್ದವರನ್ನ ರೋಮಾಂಚನಗೊಳಿಸಿತು.
ನಮ್ಮನ್ನ ಒಳ್ಳೆ ರೀತಿ ನೋಡ್ಕೊಳ್ತಾರೆ ಅದಕ್ಕೆ ನಮಗೆ ಅವರೇ ಬೇಕು. ಶಾಲಿನಿ ಟೀಚರ್ ನಮಗೆ ಚೆನ್ನಾಗಿ ಪಾಠ ಮಾಡ್ತಾರೆ, ನಾವು ಬಿದ್ದು ಗಾಯ ಮಾಡಿಕೊಂಡರೆ ನಮಗೆ ಚೆನ್ನಾಗಿ ಟ್ರೀಟ್ ಮಾಡ್ತಾರೆ. ಪಾಠ ಅರ್ಥವಾಗುವ ತರ ಹೇಳಿಕೊಡ್ತಾರೆ. ಹಾಗಾಗಿ ನಮಗೆ ಶಾಲಿನಿ ಟೀಚರ್ ಬೇಕು ಎನ್ನುವುದು ಮಕ್ಕಳ ಆಗ್ರಹವಾಗಿತ್ತು.
ಮುಖ್ಯೋಪಾಧ್ಯಾಯ ನಡುವಿನ ಭಿನ್ನಮತದಿಂದ ಶಿಕ್ಷಕರು ವರ್ಗಾವಣೆ ಬಯಸಿದರು?
ಶಿಕ್ಷಕಿ ಶಾಲಿನಿಯವರು ವಿದ್ಯಾರ್ಥಿಗಳೊಂದಿಗೆ ಮತ್ತು ಪೋಷಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಈ ಹಿಂದೆ ಶಾಲೆಯಲ್ಲಿ ಮಕ್ಕಳ ಕೊರತೆಯಿದ್ದಾಗ ಶಾಲೆಯ ಹಳೆ ವಿದ್ಯಾರ್ಥಿ ಸಂಘದೊಂದಿಗೆ ಮತ್ತು ನಾಗರೀಕರೊಂದಿಗೆ ಸೇರಿ ಶಾಲೆಗೆ 50ಕ್ಕೂ ಹೆಚ್ಚು ಮಕ್ಕಳು ಸೇರ್ಪಡೆಗೊಳ್ಳುವಂತೆ ಮಾಡಿದ್ದರು. ಇದರಿಂದ ಶಾಲೆಗೆ ಬೇಕಾದ ಸೌಕರ್ಯಗಳು ಕೂಡ ಹೆಚ್ಚಾದವು. ಮುಖ್ಯಶಿಕ್ಷಕರ ನೇಮಕ ಕೂಡ ಆಯ್ತು, ಆದರೆ ಮುಖ್ಯ ಶಿಕ್ಷಕರು ಶಾಲೆಯ ಅಭಿವೃದ್ದಿ ಕಡೆಗೆ ಹೆಚ್ಚಿಗೆ ಗಮನಹರಿಸದೇ, ಮಕ್ಕಳ ಕುರಿತು ನಿರ್ಲಕ್ಷವಹಿಸುತ್ತಿದ್ದಾರೆ. ಮತ್ತು ಶಿಕ್ಷಕಿ ಶಾಲಿನಿಯೊಂದಿಗೆ ಕೂಡ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎನ್ನುವುದು ಪೋಷಕರ ಆರೋಪ.
ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿಗಳು
ನಂತರ ಸ್ಥಳಕ್ಕೆ ಬಂದ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಬಿ.ಎ. ಶೇಷಗಿರಿ ರಾವ್, ಇ.ಸಿ.ಒ. ಮಂಜುನಾಥ ನಾಯ್ಕ್, ಬಿ.ಆರ್.ಪಿ. ನಾಗರಾಜ್, ಮಂಜುನಾಥ ಹೊಳ್ಳ ಪೋಷಕರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು. ನಂತರ ಮೇಲಧಿಕಾರಿಗಳ ಸೂಚನೆ ಮೇರೆಗೆ ಸದ್ಯ ಅಲ್ಲಿಯೇ ಶಿಕ್ಷಕರನ್ನ ಈ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಉಳಿಸಿಕೊಳ್ಳುವುದಾಗಿ ಹೇಳಿದರು.
ಮುಖ್ಯ ಶಿಕ್ಷಕರನ್ನ ವರ್ಗಾವಣೆ ಮಾಡಲು ಏನು ಮಾಡಬೇಕು?
ಶಾಲೆಯ ಮುಖ್ಯಶಿಕ್ಷಕಿಯ ಕಾರ್ಯನಿರ್ವಹಣೆ ಬಗ್ಗೆ ಅಧಿಕಾರಿಗಳ ಎದುರಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಪೋಷಕರು, ಮಕ್ಕಳ ಕುರಿತು ತೀರಾ ನಿರ್ಲಕ್ಷ್ಯವನ್ನ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಷ್ಟರೊಳಗೆ ಮುಖ್ಯಶಿಕ್ಷಕರ ವಿಚಾರವಾಗಿ ಹಲವು ಸಭೆಗಳನ್ನ ಕರೆಯಲಾಗಿದೆ. ನಮಗೆ ಬೇರೆ ಕೆಲಸವಿಲ್ಲವೇ? ಶಾಲೆಗೆ ಕಳುಹಿಸಿದ ಮೇಲೂ ಮಕ್ಕಳ ಹಿಂದೆ ಇರಲು ಸಾಧ್ಯವೇ ಎಂದು ಅಸಮಧಾನ ವ್ಯಕ್ತಪಡಿಸಿದರು. ಈ ವಿಚಾರ ನನ್ನ ವ್ಯಾಪ್ತಿಯಿಂದ ಹೊರಗಿದೆ. ಈ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿಗಳನ್ನ ಸಂಪರ್ಕಿಸುವಂತೆ ಸೂಚಿಸಿದರು.