ಮಂಗಳೂರು, ಜು 17 (Daijiworld News/RD): ಮಹಿಳೆಯರಿಗಾಗಿ ಮಾಹಿತಿ, ಸಲಹೆ ಹಾಗೂ ತುರ್ತು ಪರಿಹಾರ ಒದಗಿಸಲೆಂದು "ಮಹಿಳಾ ವನ್ ಸ್ಟಾಪ್ ಸರ್ವೀಸ್ ಸೆಂಟರ್ " ಎನ್ನುವ ವಿನೂತನ ಸೇವೆಯನ್ನು ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯ ಆವರಣದಲ್ಲಿ ಜು.17 ರ ಬುಧವಾರ ಆರಂಭಿಸಲಾಗಿದೆ.
ಮಹಿಳಾ ವನ್ ಸ್ಟಾಪ್ ಸರ್ವೀಸ್ ಸೆಂಟರ್ ವಿಶೇಷ ಸೇವೆಗೆ ನಗರದ ಹಿರಿಯ ಮಹಿಳಾ ಅಧಿಕಾರಿ ಸತ್ಯವತಿ ಮತ್ತು ಹೆಚ್ಚುವರಿ ಕಿರಿಯ ಮಹಿಳಾ ಪೋಲಿಸ್ ಅಧಿಕಾರಿ ಯೋಗೀಶ್ವರಿ ಚಾಲನೆ ನೀಡಿದರು.
ಉದ್ಘಾಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, " ಸರ್ಕಾರದ ಆದೇಶದ ಮೇರೆಗೆ ಮಹಿಳೆಯರಿಗಾಗಿ ಮಹಿಳಾ ವನ್ ಸ್ಟಾಪ್ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ಒಂದೇ ಜಾಗದಲ್ಲಿ ಪೊಲೀಸರು ತ್ವರಿತಗತವಾಗಿ ಸ್ಪಂದಿಸಿ ಕಾನೂನಾತ್ಮವಾಗಿ, ವೈದ್ಯಕೀಯವಾಗಿ, ಸಮಾಲೋಚನೆ ನಡೆಸಿ ಪರಿಹಾರ ನೀಡುವಂತಹ ಕೆಲಸ ಮಹಿಳಾ ವನ್ ಸ್ಟಾಪ್ ಸರ್ವೀಸ್ ಸೆಂಟರ್ ನಲ್ಲಿ ನಡೆಯುತ್ತದೆ.ಕರ್ನಾಟಕ ಪೊಲೀಸ್ ಮಹಿಳೆಯರ ಸುರಕ್ಷತೆಯ ಬಗ್ಗೆ ಆದ್ಯತೆ ನೀಡಿದ್ದು ಈ ನಿಟ್ಟಿನಲ್ಲಿ ಅಬ್ಬಕ್ಕಾ ಪಡೆಯನ್ನು ಈಗಾಗಲೇ ಪ್ರಾರಂಭವಾಗಿದೆ. ಈ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ.
ಮಹಿಳೆಯರು ಸಮಸ್ಯೆಗಳಿಗೆ ಅಥವಾ ತೊಂದರೆಗಳಿಗೆ ಹಿಂಜರಿಯದೆ ಒಂದೇ ಸೂರಿನಡಿ ತಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುವುದು. ಜೊತೆಗೆ ಸೂಕ್ತ ಸೌಲಭ್ಯಗಳನ್ನು ಪಡೆಯಬಹುವುದಾಗಿದೆ. ಆಪ್ತ ಸಮಾಲೋಚನೆ, ಕಾನೂನು, ವೈದ್ಯಕೀಯ ಹಾಗೂ ಪೊಲೀಸರ ಸಹಾಯವನ್ನು ಈ ಕೇಂದ್ರದಲ್ಲಿ ಪಡೆಯಬಹುದಾಗಿದೆ. ಪ್ರಸ್ತುತ ಮಹಿಳಾ ವನ್ ಸ್ಟಾಪ್ ಸೇವಾ ಕೇಂದ್ರ ತಾತ್ಕಲಿಕಾ ಕಟ್ಟಡದಲ್ಲಿ ಆರಂಭಿಸಲಾಗಿದ್ದು, ಶೀಘ್ರದಲ್ಲಿಯೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಖಾಯಂ ವಕೀಲರು ಮತ್ತು ವೈದ್ಯರು ಕೇಂದ್ರದಲ್ಲಿ ಲಭ್ಯವಿದ್ದು ಇನ್ನೂ ಎರಡು ವಾರದೊಳಗೆ ಅವರ ನೇಮಕಾತಿ ಮಾಡಲಾಗುವುದು ಎಂದು ಪೋಲಿಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿ.ಸಿ.ಪಿ. ಹನುಮಂತರಾಯ, ಡಿ.ಸಿ.ಪಿ. ಲಕ್ಷ್ಮೀ ಗಣೇಶ್, ಎ.ಸಿ.ಪಿ. ಮಂಜುನಾಥ್ ಶೆಟ್ಟಿ ಎ.ಸಿ.ಪಿ. ಭಾಸ್ಕರ್ ವಿ.ಬಿ ಮುಂತಾದವರು ಉಪಸ್ಥಿತರಿದ್ದರು.