ಕುಂದಾಪುರ, ಜು 18 (Daijiworld News/MSP): ಇತ್ತೀಚೆಗೆ ಕರಾವಳಿಯಲ್ಲಿ ಹೆಚ್ಚುತ್ತಿರುವ ಜಾನುವಾರು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳ ಕೈವಾಡವನ್ನು ಕೋಟ ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಗೌಡ ಪಿ.ಡಿ ಬಯಲಿಗೆಳೆದಿದ್ದಾರೆ.
ಇತ್ತೀಚೆಗೆ ಸಾಸ್ತಾನ ಟೋಲ್ ಗೇಟ್ ಬಳಿ ಕೋಟ ಠಾಣಾಧಿಕಾರಿ, ಖಡಕ್ ಎಸೈ ನಿತ್ಯಾನಂದ ಗೌಡ ವಾಹನ ತಪಾಸಣೆ ಮಾಡಿದಾಗ 13 ಕೋಣ ಹಾಗೂ 7 ಎಮ್ಮೆಗಳನ್ನು ಅಕ್ರಮವಾಗಿ ಮಾರಾಟಕ್ಕೆ ಸಾಗಿಸಲಾಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆರು ಜನರ ಬಂಧನವಾಗಿತ್ತು. ಈ ಸಂದರ್ಭ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಇಡೀ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಜಿಲ್ಲೆಯ ಏಳು ಪೊಲೀಸ್ ಠಾಣೆ ಕೆಲವು ಪೊಲೀಸರು ಭಾಗಿಯಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಕಳ್ಳಾಟಿಕೆಗೆ ಕೊಳ್ಳಿ ಇಟ್ಟ ಎಸೈ : ಕರಾವಳಿಯಲ್ಲಿ ಜಾನುವಾರು ಕಳವು ಪ್ರಕರಣಗಳು ಹೆಚ್ಚುತ್ತಿದ್ದಂತೆಯೇ ಸಾಸ್ತಾನದಲ್ಲಿ ಕೋಟ ಎಸೈ ಕೈಗೆ ಸಿಕ್ಕಿಬಿದ್ದ ಖದೀಮರನ್ನು ಸರಿಯಾಗಿ ವಿಚಾರಿಸಿದ ಎಸೈ ನಿತ್ಯಾನಂದ ಗೌಡ ಪ್ರಕರಣವನ್ನು ಅಲ್ಲಿಗೇ ಕೈ ಬಿಡಲಿಲ್ಲ. ಬದಲಿಗೆ ಆರೋಪಿಗಳ ಮೊಬೈಲ್ ನಂಬರಿಗೆ ಬಂದ ಕರೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮೊಬೈಲ್ ಕಾಲ್ ರೆಕಾರ್ಡ್ ತೆಗೆದಾಗ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಈ ಅಕ್ರಮ ಕಳ್ಳದಂಧೆಯ ಹಿಂದೆ ಬಹುಪಾಲು ಪೊಲೀಸರ ಶಾಮೀಲಾತಿ ಇರುವ ಆತಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಹಲವು ಪೊಲೀಸ್ ಸಿಬ್ಬಂದಿಗಳ ಖಾತೆಗೆ ಆನ್ಲೈನ್ ಮೂಲಕ ಹಣ ವರ್ಗಾವಣೆ ಆಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಒಂದು ಮಾಹಿತಿಯ ಪ್ರಕಾರ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕದಲ್ಲಿರುವ ಪೊಲೀಸ್ ಠಾಣೆಗಳಿಗೆ ಪ್ರತೀ ತಿಂಗಳಿಗೆ ಒಟ್ಟಾರೆ ಒಂದೂವರೆ ಲಕ್ಷ ರೂಪಾಯಿ ಸಂದಾಯವಾಗುತ್ತಿದೆ ಎನ್ನುವ ಆತಂಕಕಾರಿ ಅಂಶಗಳೂ ಬೆಳಕಿಗೆ ಬಂದೆ ಎನ್ನಲಾಗಿದೆ. ಉಡುಪಿ ಜಿಲ್ಲೆಯ ಏಳು ಠಾಣೆಗಳಿಗೆ ಮಾಮೂಲಿ ಸಂದಾಯವಾಗುತ್ತಿದೆ ಎನ್ನಲಾಗಿದ್ದು, ನಿಷ್ಪಕ್ಷಪಾತ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.
ಇಬ್ಬರು ಪೊಲೀಸರ ಬಂಧನ : ಅಕ್ರಮ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಪೊಲೀಸರ ಹೆಸರುಗಳು ಕೇಳಿ ಬರುತ್ತಿದ್ದು, ಈಗಾಗಲೇ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಬಂಧಿತ ಆರೋಪಿಗಳಲ್ಲಿ ಒಬ್ಬ ಭಟ್ಕಳದ ಮಂಕಿ ಪೊಲೀಸ್ ಠಾಣಾ ಸಿಬ್ಬಂದಿಯಾಗಿದ್ದು, ಮತ್ತೋರ್ವನನ್ನು ಉಡುಪಿ ಕರಾವಳಿ ಕಾವಲುಪಡೆಯ ಸಿಬ್ಬಂದಿ ಎಂದು ತಿಳಿದು ಬಂದಿದೆ. ಇನ್ನೂ ಆರೇಳು ಜನ ಪೊಲೀಸರು ಈ ಜಾಲದಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಡೆಸುವ ಹೈವೇ ಪೆಟ್ರೋಲ್ ಪಾಲುದಾರಿಕೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಪ್ರಕರಣದ ತನಿಖೆಗೆ ಉಡುಪಿ ಎಸ್ಪಿ ನಿಶಾ ಜೇಮ್ಸ್ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಕೋಟ ಎಸೈ ನಿತ್ಯಾನಂದ ಗೌಡರ ಎದೆಗಾರಿಕೆಗೆ ಈಗ ಇಡೀ ಕರಾವಳಿ ಶ್ಲಾಘನೆ ವ್ಯಕ್ತಪಡಿಸಿದೆ.