ಉಡುಪಿ, ಜು18(Daijiworld News/SS): ಅಂದು ದತ್ತಮಾಲಾಧಾರಿಗಳನ್ನು ಭಿಕ್ಷುಕರು ಎಂದು ಸಿಎಂ ಕುಮಾರಸ್ವಾಮಿ ಹಿಯಾಳಿಸಿ ನಿಂದಿಸಿದ್ದ ಪರಿಣಾಮ ಇವತ್ತು ಕುಮಾರಸ್ವಾಮಿಗೆ ಈ ಪರಿಸ್ಥಿತಿ ಬಂದಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದೋಸ್ತಿ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ ಎದುರಾಗಿದ್ದು, ಅತೃಪ್ತ ಶಾಸಕರ ರಾಜಿನಾಮೆ ಪ್ರಹಸನದ ಬೆನ್ನಲ್ಲೇ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ. ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ರಘುಪತಿ ಭಟ್, ಅಂದು ದತ್ತಮಾಲಾಧಾರಿಗಳನ್ನು ಭಿಕ್ಷುಕರು ಎಂದು ಸಿಎಂ ಕುಮಾರಸ್ವಾಮಿ ಹಿಯಾಳಿಸಿ ನಿಂದಿಸಿದ್ದರು. ಪರಿಣಾಮ, ಇಂದು ಒಂದೊಂದು ಸ್ಥಾನಕ್ಕೂ ಕಾಂಗ್ರೆಸ್ ಬಳಿ ಭಿಕ್ಷೆ ಬೇಡುವಂತಾಗಿದೆ ಎಂದು ಟೀಕಿಸಿದರು.
ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಕುರ್ಚಿಯನ್ನು ಇಂದೇ ಚೆನ್ನಾಗಿ ಆಸ್ವಾದಿಸಲಿ. ಮತ್ತೆ ನೀವು ಎಂದಿಗೂ ಸಿಎಂ ಆಗುವುದಿಲ್ಲ. ಕುಮಾರಸ್ವಾಮಿಯವರ ಈ ಪರಿಸ್ಥಿತಿಗೆ ದತ್ತಮಾಲಾಧಾರಿಗಳ ಶಾಪವೂ ಕಾರಣ ಆಗಿರಬಹುದು ಎಂದು ಹೇಳಿದ್ದಾರೆ.
ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಇಂದು ನಡೆಯುವ ವಿಶ್ವಾಸ ಮತ ಯಾಚನೆಯಲ್ಲಿ ನಿರ್ಧಾರವಾಗಲಿದೆ. ಮೈತ್ರಿ ಸರ್ಕಾರದ ಪತನಕ್ಕೆ ಬಿಜೆಪಿ ಆಟಕ್ಕೆ ಪ್ರತಿಯಾಗಿ 'ವಿಶ್ವಾಸ ಮತ' ಯಾಚನೆಯ ಪ್ರತಿ ದಾಳ ಉರುಳಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸರ್ಕಾರ ಉಳಿಸಿಕೊಳ್ಳುವ ಶತಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದೋಸ್ತಿ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ ಎದುರಾಗಿದ್ದು, ಅತೃಪ್ತ ಶಾಸಕರ ರಾಜಿನಾಮೆ ಪ್ರಹಸನದ ಬೆನ್ನಲ್ಲೇ ಸಿಎಂ ಎಚ್ ಡಿ ಕುಮಾರಸ್ವಾಮಿ ಇಂದು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.