ಮಂಗಳೂರು, ಜು 18 (Daijiworld News/MSP): ಬಜ್ಪೆ ಸಮೀಪದ ಮಳಲಿ ಯಲ್ಲಿ ಜು.14 ರಂದು ಮಾರಕಾಯುಧಗಳನ್ನು ಹಿಡಿದುಕೊಂಡು ಬೆದರಿಕೆ ಹಾಕಿದ ದರೋಡೆಕೋರರು, ಖಾಸಗಿ ಫೈನಾನ್ಸರ್ ಒಬ್ಬರಿಂದ ಸುಮಾರು 2 ಲಕ್ಷ ರೂ. ನಗದು ದೋಚಿ ಪರಾರಿಯಾಗಿರುವ ಘಟನೆಗೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ ಕೇವಲ ಮೂರು ದಿನದಲ್ಲಿ ಕಾರ್ಯಾಚರಣೆ ನಡೆಸಿ ಬಜ್ಪೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ನ ಅಬ್ದುಲ್ ಅಜೀಜ್ ಯಾನೆ ನೌಷಾದ್ ಯಾನೆ ಅಕಲ್ (19), ಗಂಜಿಮಠ, ಬಡಗುಳಿಪ್ಪಾಡಿ ಗ್ರಾಮದ ನಾರ್ಲಪದವಿನ ಮಹಮ್ಮದ್ ಮುಸ್ತಾಫ ಯಾನೆ ಮುಸ್ತಾಫ (23) ,ಉಳಾಯಿಬೆಟ್ಟು ಗ್ರಾಮದ ಪಟ್ರಕೋಡಿ ಮನೆಯ ಆಶ್ಲೇಷ್ ಎ ಕೋಟ್ಯಾನ್ ಯಾನೆ ಅಣ್ಣು ಪ್ರಾಯ (20 ) ಎಂದು ಗುರುತಿಸಲಾಗಿದೆ.
ಖಾಸಗಿ ಫೈನಾನ್ಸರ್ ಆಗಿದ್ದ ದೂರುದಾರ ಸೆಂಥಿಲ್ ಕುಮಾರ್ ಅವರು ತನ್ನ ಮನೆಯಾದ ಮರೊಳಿಯಿಂದ ತನ್ನ ಬೈಕಿನಲ್ಲಿ ಹೊರಟು ಬಿ.ಸಿ.ರೋಡ್ ಮಾರ್ಗವಾಗಿ ಪೊಳಲಿ ಅಡ್ಡೂರಿನಿಂದ ಮರಳು ಯಾರ್ಡ್ ರಸ್ತೆಯಲ್ಲಿ ಮಳಲಿ ಸೈಟಿಗೆ ಪ್ರಯಾಣಿಸುತ್ತಿದ್ದಾಗ ಭಾನುವಾರ ಮಧ್ಯಾಹ್ನ ಸುಮಾರು 2:30 ಗಂಟೆಗೆ ಎರಡು ಬೈಕ್ ನಲ್ಲಿ ಬಂದ ನಾಲ್ಕು ಯುವಕರು ಸೆಂಥಿಲ್ ಕುಮಾರ್ ರವರ ಬೈಕಿಗೆ ತಮ್ಮ ಬೈಕನ್ನು ಅಡ್ಡ ಇಟ್ಟು ಹಣ ಕೊಡುವಂತೆ ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ತಲವಾರಿನಿಂದ ಬೆದರಿಸಿ ಬೈಕಿನ ಬಾಕ್ಸನ್ನು ಓಡೆದು ಅದರಲ್ಲಿದ್ದ ನಗದು ರೂಪಾಯಿ ಎರಡು ಲಕ್ಷದ ಐದು ಸಾವಿರವನ್ನು ವನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಸೆಂಥಿಲ್ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳು ಗುರುಪುರ ಕುಕ್ಕುದಕಟ್ಟೆ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಜು.೧೭ ರ ಬುಧವಾರ ಮೂವರನ್ನು ಬಂಧಿಸಿ ನ್ಯಾಯಲಯದ ಮುಂದೆ ಹಾಜರುಪಡಿಸಿದ್ದಾರೆ. ಬಂಧಿತರಿಂದ ದರೋಡೆ ಮಾಡಿದ ನಗದು ರೂ 21,800 ರೂ ದರೋಡೆ ಮಾಡಲು ಉಪಯೋಗಿಸಿದ ಬೈಕ್ - 1, ಮೂರು ಮೊಬೈಲ್ ತಲವಾರು-1 ಚೂರಿ-1 ಒಟ್ಟಾರೆ ಸುಮಾರು ರೂ 60,000 ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.