ಬಂಟ್ವಾಳ, ಜು 18 (Daijiworld News/SM): ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆಯನ್ನು ಯುವಕನೋರ್ವ ಜೀವವುಳಿಸಿದ ಘಟನೆ ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ಪಾರ್ವತಿ(60) ಎಂಬವರ ಬಾವಿಗೆ ಬಿದ್ದಿದ್ದ ವೃದ್ಧೆಯಾಗಿದ್ದು, ಕೊಳಕೆ ನಿವಾಸಿ ಸಿದ್ದೀಕ್ ಪ್ರಾಣ ಉಳಿಸಿ ಸಾರ್ಥಕತೆ ಮೆರೆದ ಯುವಕ.
ಪಾರ್ವತಿಯವರು ಗುರುವಾರ ಬೆಳಿಗ್ಗೆ ಮನೆಯ ಸಮೀಪದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದರು. ಇದನ್ನು ಕಂಡ ಪಕ್ಕದ ಮನೆಯವರು ಸಹಾಯಕ್ಕಾಗಿ ಕೂಗಾಡುತ್ತಿದ್ದರು. ಇದೇ ವೇಳೆ ಪಕ್ಕದ ಅಂಗಡಿಯೊಂದರಲ್ಲಿ ಪತ್ರಿಕೆ ಓದುತ್ತಾ ಕುಳಿತ್ತಿದ್ದ ಸ್ಥಳೀಯ ಯುವಕ ಸಿದ್ದೀಕ್ ತಕ್ಷಣ ಬಾವಿಯತ್ತ ಧಾವಿಸಿ ತನ್ನ ಪ್ರಾಣದ ಹಂಗನ್ನು ತೊರೆದು ನೀರಿಗೆ ಧುಮುಕಿದ್ದಾರೆ. ಬಳಿಕ ಹಗ್ಗದ ಮೂಲಕ ಸ್ಥಳೀಯರ ಸಹಾಯದಿಂದ ಪಾರ್ವತಿ ಅವರನ್ನು ಮೇಲೆಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಘಟನೆಯಿಂದ ಅಶ್ವಸ್ಥಗೊಂಡಿದ್ದ ಪಾರ್ವತಿ ಅವರನ್ನು ತಕ್ಷಣ ಬಂಟ್ವಾಳ ಆಸ್ಪತ್ರೆಗೆ ದಾಖಲಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ. ಇದೀಗ ಪಾರ್ವತಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಪಾರ್ವತಿ ಅವರಿಗೆ ಮೂವರ ಮಕ್ಕಳ ಪೈಕಿಯ ಕಿರಿಯ ಮಗನಾದ ದಿವಾಕರ್ ಅವರೊಂದಿಗೆ ವಾಸವಾಗಿದ್ದಾರೆ. ದಿವಾಕರ ಹಾಗೂ ಸಿದ್ದೀಕ್ ಪರಸ್ಪರ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ.
ಯುವಕನ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ:
ತನ್ನ ಜೀವದ ಹಂಗು ತೊರೆದು, ಹಿಂದೆ-ಮುಂದೆ ನೋಡದೆ ಬಾವಿಗೆ ಧುಮುಕಿ ಪಾರ್ವತಿ ಅವರನ್ನು ರಕ್ಷಿಸಿದ ಯುವಕ ಸಿದ್ದೀಕ್ ಅವರ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸಿದ್ದೀಕ್ ಅವರ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲೂ ಶ್ಲಾಘನೆ ವ್ಯಕ್ತವಾಗುತ್ತಿದೆ.