ಕಣ್ಣೂರು, ಜು 18 (Daijiworld News/SM): ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ನಿಷೇಧಿತ ಸಿಗರೇಟುಗಳನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ. ಕಾಸರಗೋಡಿನ ಅಬ್ದುಲ್ ಗಫೂರ್ ಪ್ರಕರಣದ ಆರೋಪಿಯಾಗಿದ್ದಾನೆ.
ಕುವೈತ್ ನಿಂದ ಕಣ್ಣೂರಿಗೆ ಆಗಮಿಸಿದ ಇಂಡಿಗೋ ವಿಮಾನದಲ್ಲಿ ಆರೋಪಿ ಅಕ್ರಮವಾಗಿ ಸಿಗರೇಟುಗಳನ್ನು ಸಾಗಾಟ ಮಾಡುತ್ತಿದ್ದ. ಆರೋಪಿಯ ಬ್ಯಾಗ್ ತಪಾಸಣೆ ವೇಳೆ ನಿಷೇಧಿತ ಸಿಗರೇಟು ಸಾಗಾಟ ಪತ್ತೆಯಾಗಿದೆ.
200 ಸಿಗರೇಟುಗಳ ಸುಮಾರು 80 ಪ್ಯಾಕೆಟ್ ಗಳು ಆರೋಪಿಯ ಬಳಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 1.60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕಣ್ಣೂರು ವಿಮಾನ ನಿಲ್ದಾಣ ಆರಂಭಗೊಂಡ ಬಳಿಕ ಸಿಗರೇಟು ಸಾಗಾಟಕ್ಕೆ ಸಂಬಂಧಿಸಿದಂತೆ ಇದು 5ನೇ ಪ್ರಕರಣವಾಗಿದೆ.