ಹೊನ್ನಾವರ, ಡಿ 14: ಉತ್ತರಕನ್ನಡದಲ್ಲಿ ಹೊತ್ತಿ ಉರಿಯುತ್ತಿರುವ ಕೋಮು ದಳ್ಳುರಿಯ ಕಿಡಿ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕೋಮು ಘರ್ಷಣೆ,ಪರೇಶ್ ಮೇಸ್ತಾ ಹತ್ಯೆ, ಹಿಂಸಾಚಾರ, ಪೊಲೀಸ್ ಲಾಠಿ ಚಾರ್ಜ್ ಹೀಗೆ ಒಂದಿಲ್ಲೊಂದು ವಿಚಾರಗಳಿಗೆ ಇತ್ತೀಚೆಗೆ ಸದಾ ಸುದ್ದಿಯಲ್ಲಿರುವ ಉತ್ತರ ಕನ್ನಡ ಹೊನ್ನವರದಲ್ಲಿ ದುಷ್ಕರ್ಮಿಗಳು ಮತ್ತೆ ಶಾಂತಿ ಕದಡುವ ಯತ್ನ ಮುಂದುವರಿಸಿದ್ದಾರೆ.
ಇಲ್ಲಿನ ಶಾಲೆಗೆಂದು ಹೋಗುತ್ತಿದ್ದ ಕಾವ್ಯ ಶೇಖರ್ ಎಂಬ ವಿದ್ಯಾರ್ಥಿನಿಗೆ ಅನ್ಯಕೋಮಿನ ಇಬ್ಬರು ಯುವಕರು ಇರಿದು ಹತ್ಯೆಗೈಯಲು ಯತ್ನಿಸಿದ್ದು, ಈ ವೇಳೆ ಆಕೆ ತಪ್ಪಿಸುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದ್ರೆ ಆಕೆಯ 2 ಕೈಗಳಿಗೆ ಚೂರಿ ಇರಿತದ ಗಾಯಗಳಾಗಿದ್ದು, ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ. ಘಟನೆಯಿಂದಾಗಿ ಮತ್ತೆ ಗಲಭೆ ಸಾಧ್ಯತೆ ಇರೋದ್ರಿಂದ ಹೊನ್ನಾವರದಲ್ಲಿ 24 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ ಗೊಳಿಸಲಾಗಿದೆ. ಎಸ್ಪಿ ವಿನಾಯಕ್ ಪಾಟೀಲ್ , ಜಿಲ್ಲಾಧಿಕಾರಿ ನಕುಲ್ ಆಸ್ಪತ್ರೆಗೆ ಭೇಟಿ ಕಾವ್ಯಾಳ ಬಳಿ ವಿವರ ಪಡೆದಿದ್ದಾರೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.