ಮಂಗಳೂರು, ಜು20(Daijiworld News/SS): ಕಾಸರಗೋಡು ಸಮೀಪದ ಪೈವಳಿಕೆಯ ಅವಿವಾಹಿತ ಯುವತಿ ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಸೈನೈಡ್ ಮೋಹನ್ ಕುಮಾರ್ಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕಾಸರಗೋಡು ಪೈವಳಿಕೆಯ 26 ವರ್ಷದ ಅವಿವಾಹಿತ ಯುವತಿಯೊಬ್ಬರನ್ನು ಸೈನೈಡ್ ಕಿಲ್ಲರ್ ಮೋಹನ್ ಕುಮಾರ್, ಸುಧಾಕರ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯನ್ನು ಚಿನ್ನಾಭರಣ ಧರಿಸಿ ಮಂಗಳೂರಿಗೆ ಬರಲು ಹೇಳಿದ್ದ. ಅದರಂತೆ ಆಕೆ ಅತ್ತೆ ಪರಮೇಶ್ವರಿ ಜತೆ 2006 ಮಾರ್ಚ್ 20ರಂದು ಬಂದಿದ್ದರು. ಅತ್ತೆಯನ್ನು ಮನೆಗೆ ಕಳುಹಿಸಿ ಯುವತಿ ಮತ್ತು ಮೋಹನ್ ಮಡಿಕೇರಿಗೆ ತೆರಳಿದ್ದರು. ಅಲ್ಲಿ ಲಾಡ್ಜ್ನಲ್ಲಿ ಆಕೆ ಮೇಲೆ ಅತ್ಯಾಚಾರ ಮಾಡಿ ಮರುದಿನ ದೇವಸ್ಥಾನಕ್ಕೆ ಹೋಗಲಿಕ್ಕಿದೆ ಎಂದು ಹೇಳಿ ಆಕೆಯ ಚಿನ್ನಾಭರಣ ತೆಗೆದಿಟ್ಟು ಮಡಿಕೇರಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಕರೆ ತಂದಿದ್ದ. ಅಲ್ಲಿ ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್ ನೀಡಿದ್ದ. ಮಹಿಳೆಯರ ಶೌಚಗೃಹಕ್ಕೆ ತೆರಳಿ ಅದನ್ನು ಸೇವಿಸಿದ್ದ ಯುವತಿ ಅಲ್ಲೇ ಮೃತಪಟ್ಟಿದ್ದರು.
ಬಳಿಕ ಆಕೆಯ ಚಿನ್ನಾಭರಣ ಸಹಿತ ಸೈನೈಡ್ ಕಿಲ್ಲರ್ ಮೋಹನ್ ಕುಮಾರ್ ಪರಾರಿಯಾಗಿದ್ದ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸೈನೈಡ್ ಮೋಹನ್ 2009 ಅ.21ರಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆ ಸಂದರ್ಭ ವಿಚಾರಣೆ ವೇಳೆ ಪೈವಳಿಕೆಯ ಯುವತಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದನು.
ಇದೀಗ ಸೈನೈಡ್ ಮೋಹನ್ ಕುಮಾರ್ ಮೇಲಿನ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಮೋಹನ್ ಕುಮಾರ್ ಮೇಲಿನ ಆರೋಪ ಐಪಿಸಿ ಸೆಕ್ಷನ್ 302(ಕೊಲೆ) ಅಪರಾಧಕ್ಕೆ ಜೀವನ ಪರ್ಯಂತ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ, ಸೆಕ್ಷನ್328(ವಿಷ ಉಣಿಸಿದ್ದು) ಅಪರಾಧಕ್ಕೆ 10 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಆರು ತಿಂಗಳು ಸಾದಾ ಸಜೆ, ಸೆಕ್ಷನ್ 392(ಚಿನ್ನಾಭರಣ ಸುಲಿಗೆ)ಅಪರಾಧಕ್ಕೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಸಜೆ, ಸೆಕ್ಷನ್ 394(ಸುಲಿಗೆಗಾಗಿ ವಿಷ ಪ್ರಾಶನ)ಅಪರಾಧಕ್ಕೆ 10 ವರ್ಷ ಕಠಿಣ ಶಿಕ್ಷೆ, 5,000 ರೂ. ದಂಡ, ದಂಡ ತೆರಲು ತಪ್ಪಿದರೆ ಎರಡು ವರ್ಷಗಳ ಕಾಲ ಸಾದಾ ಜೈಲು ಶಿಕ್ಷೆ, ಸೆಕ್ಷನ್ 417(ವಂಚನೆ) ಅಪರಾಧಕ್ಕೆ ಒಂದು ವರ್ಷ ಸಾದಾ ಸಜೆ, ಸೆಕ್ಷನ್ 201(ಸಾಕ್ಷಿನಾಶ) ಅಪರಾಧಕ್ಕೆ ಏಳು ವರ್ಷ ಕಠಿಣ ಶಿಕ್ಷೆ ಹಾಗೂ 5,000 ರೂ. ರೂ. ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಜೈಲುಶಿಕ್ಷೆ ಅನುಭವಿಸಲು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ತೀರ್ಪಿನ ಪ್ರಕಾರ ಸೈನೈಡ್ ಮೋಹನ್ ಕುಮಾರ್ ಒಟ್ಟು 25 ಸಾವಿರ ರೂ. ದಂಡ ಪಾವತಿಸಬೇಕು.