ಮಂಗಳೂರು, ಜು 20 (Daijiworld News/MSP): ನಗರದ ಬೀಚ್ ಗಳಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪಣಂಬೂರು ಪೊಲೀಸರು ಕಾರ್ಯಾಚರಣೆ ನಡೆಸಿ ಶುಕ್ರವಾರ ಮೂವರನ್ನು ಬಂಧಿಸಿದ್ದು ಲಕ್ಷಾಂತರ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಉಳ್ಳಾಲ ಒಳಪೇಟೆಯ ಅಬೂಬಕ್ಕರ್ ಮಿಸ್ಭಾ (24), ಸೋಮೇಶ್ವರದ ಪೆರ್ಮನ್ನೂರು ಗ್ರಾಮ ಶಬ್ಬೀರ್ ಅಹಮ್ಮದ್(27) , ಉಳ್ಳಾಲದ ಶಿಹಾಬ್ ಅಬ್ದುಲ್ ರಝಾಕ್ (27) ಎಂದು ಗುರುತಿಸಲಾಗಿದೆ.
ಬಂಧಿತರಿಂದ 80 ಮೌಲ್ಯದ 16.45 ಗ್ರಾಂ ತೂಕದ ಎಂಡಿಎಂಎ, 25000 ರೂ ಮೌಲ್ಯದ ಸ್ಕೂಟರ್, 2 ಸಾವಿರ ಮೌಲ್ಯದ 4 ಮೊಬೈಲ್ , 3200 ರೂ ನಗದು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ಒಟ್ಟು ಮೌಲ್ಯ 1,28,200 ರೂ.ಎಂದು ಅಂದಾಜಿಸಲಾಗಿದೆ.
ಈ ಮೂವರು ಆರೋಪಿಗಳು ಮುಂಬಯಿಗೆ ತೆರಳಿ ಅಲ್ಲಿಂದ ಎಂಡಿಎಂಎ ಖರೀದಿ ಮಾಡುತ್ತಿದ್ದರು. ಬಳಿಕ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ, ಮಂಗಳೂರು ನಗರ, ಉಳ್ಳಾಲ, ಪಣಂಬೂರು, ಹಾಗೂ ಇತರ ಬೀಚ್ ಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಶೇಷ ಅಪರಾಧ ಪತ್ತೆದಳ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದರೂ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.