ಮಂಗಳೂರು, ಜು 20 (Daijiworld News/MSP): ಉತ್ತರ ಪ್ರದೇಶ ಸರ್ಕಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿರುವುದನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪಕ್ಷದ ಕಚೇರಿಯ ಎದುರು ಜುಲೈ 20 ರ ಶನಿವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಘೋರವಾಲ ಎಂಬಲ್ಲಿ ಭೂ ವ್ಯಾಜ್ಯದ ಹಿನ್ನೆಲೆಯಲ್ಲಿ ನಡೆದ ಗಲಭೆಯಲ್ಲಿ ಹತ್ತು ಮಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಸಾವನ್ನಪ್ಪಿದವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಹೋದ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿದ ಬಿಜೆಪಿ ಸರಕಾರ ಅಧಿಕಾರದ ದುರ್ಬಳಕೆ ಮಾಡಿಕೊಂಡಿದೆ. ಅಲ್ಲದೆ ಬಿಜೆಪಿಗರು ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದ್ದಾರೆ. ನೊಂದವರ ಭೇಟಿಗಾಗಿ ಹೋದ ಪ್ರಿಯಾಂಕಾ ಗಾಂಧಿ ಬಂಧನವನ್ನು ನಾವು ಖಂಡಿಸುತ್ತೇವೆ ಎಂದರು.
ಮಾಜಿ ಶಾಸಕ ಅಭಯಚಂದ್ರ ಜೈನ್ ಮಾತನಾಡಿ "ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿದೆ. ಬಿಜೆಪಿ ಪಕ್ಷ ದಲಿತ ಮತ್ತು ಬಡ ವರ್ಗದ ಪರ ಕೆಲಸ ಮಾಡುತ್ತಿಲ್ಲ. ಪ್ರಿಯಾಂಕಾ ಗಾಂಧಿ ಬಂಧನವನ್ನು ತೀವ್ರವಾಗಿ ಖಂಡಿಸುತ್ತೇವೆ" ಎಂದರು.