ಕಾಸರಗೋಡು,ಜು 20 (Daijiworld News/MSP): ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಕಾಸರಗೋಡು ಜಿಲ್ಲೆ ನಲುಗಿದ್ದು , ಜನಜೀವನದ ಮೇಲೆ ಪರಿಣಾಮ ಬೀರಿದೆ. ಅಲ್ಲಲ್ಲಿ ಅಪಾರ ನಾಶ- ನಷ್ಟ ಉಂಟಾಗಿದ್ದು, ತಗ್ಗು ಪ್ರದೇಶ ಜಲಾವೃತಗೊಂಡಿದೆ.
ತಗ್ಗು ಪ್ರದೇಶದ ಸುಮಾರು 150 ಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭಾನುವಾರ ಕೂಡಾ ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆಗೆ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು , ರೆಡ್ ಅಲರ್ಟ್ ಘೋಷಿಸಿದೆ.
ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದು , ಪ್ರಸಿದ್ಧ ಮಧೂರು ಶ್ರೀ ಮಧನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ನೀರು ನುಗ್ಗಿದೆ. ಮಧುವಾಹಿನಿ ಹೊಳೆ ಉಕ್ಕಿ ಹರಿಯುತ್ತಿದ್ದು, ಇದರಿಂದ ಪರಿಸರದಲ್ಲಿ ನೆರೆ ಉಂಟಾಗಿದೆ. ಕುಂಬಳೆ, ಬಂಬ್ರಾಣ , ನೆಲ್ಲಿಕುಂಜೆ ಬಂಗರಗುಡ್ಡೆ ಕುದ್ರು , ಮಧೂರು ಪಟ್ಲ , ಅಣಂಗೂರು ಮೊದಲಾದೆಡೆ ಹಲವಾರು ಕುಟುಂಬಗಳಿಗೆ ನೀರು ನುಗ್ಗಿರುವುದರಿಂದ ಮನೆಯವರನ್ನು ಸ್ಥಳಾಂತರಿಸಲಾಗಿದೆ .
ಮೊಗ್ರಾಲ್ ನಾಂಗಿ , ವಳಚ್ಚಲ್ , ಮಿಲಾದ್ ನಗರ ಮೊದಲಾದೆಡೆಗಳಲ್ಲಿನ 25 ರಷ್ಟು ಮನೆಗಳಿಗೆ ನೀರು ನುಗ್ಗಿದೆ. ತೀರದಲ್ಲಿ ಕಡಲ್ಕೊರೆತದ ಅಬ್ಬರವು ಹೆಚ್ಚಾಗಿದೆ.ಕುಂಬಳೆ ಕೊಡ್ಯಮ್ಮೆಲ್ಲಿ ರಸ್ತೆ ಕುಸಿದಿದ್ದು, ಇದರಿಂದ ಈ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕಾಞ೦ಗಾಡ್ ಆರಾಯಿ ಹೊಳೆಯ ಸೇತುವೆ ಮುಳುಗಡೆಯಾಗಿದೆ . ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಿಂದ ಉಪ್ಪಳ ತನಕ ಹೊಂಡಗಳಿಂದ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ.