ಕೇರಳದಲ್ಲಿ ನಡೆದಿದ್ದ ಹಾಗೂ ಬಹು ಚರ್ಚೆಗೆ ಗ್ರಾಸವಾಗಿದ್ದ ಕಾನೂನು ವಿದ್ಯಾರ್ಥಿನಿ ಜಿಶಾ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಅಮೀರುಲ್ ಇಸ್ಲಾಂಗೆ ಇಲ್ಲಿನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.
ಎರ್ನಾಕುಲಂ ಪ್ರಧಾನ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎನ್. ಅನಿಲ್ ಕುಮಾರ್ ಅವರು ಅಮೀರುಲ್ ಇಸ್ಲಾಂ ಅಪರಾಧಿ ಎಂದು ಘೋಷಿಸಿದ್ದು, ಅದರಂತೆ ಇಂದು ಶಿಕ್ಷೆಯ ಪ್ರಮಾಣ ತಿಳಿಸಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಅಸ್ಸಾಂ ಮೂಲದ ವಲಸೆ ಕಾರ್ಮಿಕ ಅಮೀರುಲ್ ಇಸ್ಲಾಂ 2016ರ ಏ. 28ರಂದು ಕಾನೂನು ವಿದ್ಯಾರ್ಥಿ 30 ವರ್ಷದ ದಲಿತ ಮಹಿಳೆ ಜಿಶಾಳ ಮೇಲೆ ಅತ್ಯಾಚಾರ ನಡೆಸಿ ಬಳಿಕ ಭೀಕರವಾಗಿ ಹತ್ಯೆ ಮಾಡಿದ್ದ. ಕಾನೂನು ವಿದ್ಯಾರ್ಥಿನಿ ಮೇಲಿನ ರೇಪ್ ಪ್ರಕರಣ ಅಪರೂಪದಲ್ಲೇ ಅಪರೂಪದ ಪೈಶಾಚಿಕ ಕೃತ್ಯವಾಗಿದ್ದು ವಿಕೃತ ಕಾಮಿಯಾಗಿರುವ ಆರೋಪಿಗೆ ಮರಣ ದಂಡನೆಯನ್ನು ವಿಧಿಸಬೇಕು ಎಂದು ಪ್ರಾಸಿಕ್ಯೂಶನ್ ವಾದಿಸಿತ್ತು. ಜಿಶಾ ಮೃತದೇಹ ಆಕೆಯ ಮನೆಯ ಕೊಠಡಿಯಲ್ಲಿ ಪತ್ತೆಯಾಗಿದ್ದು, ಜಿಶಾ ದೇಹದ ಮೇಲೆ 38 ಗಾಯದ ಗುರುತುಗಳು ಪತ್ತೆಯಾವೆ. ಈ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು.