ಮಂಗಳೂರು, ಜು 20 (Daijiworld News/SM): ಮಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯು ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣರಾಗುವವರ ವಿರುದ್ಧ ಕಠಿಣ ಕ್ರಮಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಜುಲೈ 20ರ ಶನಿವಾರದಂದು ಕಾರ್ಯಾಚರಣೆ ನಡೆಸಿದ್ದು, ರೋಗ ಹರಡಲು ಕಾರಣವಾದ ಅಂಗಡಿಯೊಂದರ ಮಾಲಕರಿಗೆ ದಂಡ ವಿಧಿಸಲಾಗಿದೆ. ಟಯರ್ ಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾದ ಮಾಲಕನಿಗೆ 5000 ರೂಪಾಯಿ ದಂಡ ವಿಧಿಸಲಾಗಿದೆ.
ಕಣ್ಣೂರು ಕೆಫೆಕಾರ್ಟ್ ಸಂಸ್ಥೆಯ ಮಾಲಕ ನಿಶಾನ್ ಚಂದ್ರ ಎಂಬವರಿಗೆ ದಂಡ ವಿಧಿಸಲಾಗಿದೆ. ಇವರು ತನ್ನ ಮಳಿಗೆಯ ಆವರಣದಲ್ಲಿ ಹಳೆಯ ಟಯರ್ ಗಳನ್ನು ಇಟ್ಟಿದ್ದರು. ಇದರಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದು, ಎಚ್ಚರಿಕೆ ನೀಡಿದರು.
ಡೆಂಗ್ಯು ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಜೀವಿಗಳ ಸಂತಾನೋತ್ಪತ್ತಿಯಾಗುವ ರೀತಿಯಲ್ಲಿ ಅಂಗಡಿ–ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ಮುಂದುವರೆಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರವಹಿಸಬೇಕಾಗಿದೆ. ಯಾವುದೇ ರೀತಿಯಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವಂತಹ ಯಾವುದೇ ವಿಚಾರಗಳಿದ್ದರೆ ಅವುಗಳಿಗೆ ಕಾಯಕಲ್ಪ ನೀಡುವ ಅನಿವಾರ್ಯತೆ ಇದೆ.