ಪುತ್ತೂರು, ಜು21 (Daijiworld News/RD) : ನಕಲಿ ಚಿನ್ನಾಭರಣವನ್ನು ಅಡವಿಟ್ಟು ಬ್ಯಾಂಕಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ ದಾಖಲಿಸಿಕೊಂಡಿರುವ ಪುತ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನು ಬಂಗಾರಡ್ಕದ ನಿವಾಸಿಯಾಗಿದ್ದು, ಗಣೇಶ್ ಆಚಾರ್ಯ ಎಂದು ಗುರುತಿಸಲಾಗಿದೆ. ಬ್ಯಾಂಕೊಂದರ ನಿತ್ಯ ಠೇವಣಿ ಸಂಗ್ರಹಗಾರರಾಗಿ ಕೆಲಸ ಮಾಡುತ್ತಿದ್ದು ಗಣೇಶ್ ಆಚಾರ್ಯ, ಮುಖ್ಯರಸ್ತೆ ಮೀನರ್ ಕಾಂಪ್ಲೆಕ್ಸ್ ನಲ್ಲಿರುವ ಫೆಡರಲ್ ಬ್ಯಾಂಕ್ ನಲ್ಲಿ ಚಿನ್ನಾಭರಣ ಅಡವಿಟ್ಟು ಹಣ ಪಡೆದು ಕಂತು ಪಾವತಿ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದ.
ಆದರೆ ಇತ್ತೀಚೆಗೆ ಹಣವನ್ನು ಮರುಪಾವತಿ ಮಾಡದ ಕಾರಣ ಬ್ಯಾಂಕಿಗೆ ಅನುಮಾನ ಬಂದಿತ್ತು, ಹೀಗಾಗಿ ಬ್ಯಾಂಕ್ ಮತ್ತೊಮ್ಮೆ ಆಭರಣಗಳನ್ನು ಪರೀಕ್ಷಿಸಿತು. ಈ ವೇಳೆ ಚಿನ್ನಾಭರಣಗಳು ನಕಲಿ ಎಂದು ಬೆಳಕಿಗೆ ಬಂದಿದ್ದು, ದೂರು ನೀಡಿದ್ದರು. ಬಂದಿತ ಗಣೇಶ್ ಆಚಾರ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.