ಬಂಟ್ವಾಳ, ಜು 22 (Daijiworld News/MSP): ರಿಕ್ಷಾವೊಂದರಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ವಾಹನ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿಗಳಾದ ಅಬ್ದುಲ್ ರಝಾಕ್, ರಾಝಿಕ್ ಹಾಗೂ ರಿಯಾಝ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜು. 20 ರಂದು ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಮಂಜಲ್ ಪಲ್ಕೆ ಎಂಬಲ್ಲಿನ ಮನೆಯೊಂದರ ಹಿಂಬದಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ದನವನ್ನು ವಧೆ ಮಾಡಿ, ರಿಕ್ಷಾದಲ್ಲಿ ಸಾಗಿಸಲಾಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 60 ಕೆ.ಜಿ. ದನದ ಮಾಂಸ, ಆಟೊರಿಕ್ಷಾ, ವಧೆ ಮಾಡಲು ಉಪಯೋಗಿಸಿದ ಸಲಕರಣೆಗಳ ಸಹಿತ ಮೂವರನ್ನು ವಶಕ್ಕೆಪಡೆಯಲಾಗಿದೆ. ವಶಪಡಿಸಿಕೊಂಡಿರುವ ಸೊತ್ತುಗಳ ಮೌಲ್ಯ 1.22 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.