ಮಂಗಳೂರು, ಜು 22 (Daijiworld News/MSP): ಮಂಗಳೂರು ನಗರದಲ್ಲಿ ಬೇರೂರಿ ಯುವಜನರೇ ಟಾರ್ಗೆಟ್ ಮಾಡಿ ತನ್ನ ಕರಾಳ ಹಸ್ತ ಚಾಚಿರುವ, ಡ್ರಗ್ಸ್ ಕಪಿಮುಷ್ಟಿಯಿಂದ ಪಾರು ಮಾಡಲು ಪಣತೊಟ್ಟಿರುವ ನಗರ ಪೊಲೀಸ್ ಆಯುಕ್ತ ಡಾ|ಸಂದೀಪ್ ಪಾಟೀಲ್ ಜು.22 ರ ಸೋಮವಾರ ಹಳೆಯ ತಪ್ಪಿತಸ್ಥ ಡ್ರಗ್ಸ್ ಪೆಡ್ಲರ್ ಗಳ ಪೆರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದರು.
ಈ ಹಿಂದೆ ಮಾದಕ ವಸ್ತು ಮಾರಾಟ - ಸಾಗಾಟ ಮುಂತಾದ ಅಕ್ರಮಗಳಲ್ಲಿ ಭಾಗಿಯಾದ ಸುಮಾರು 94 ಹಳೆಯ ತಪ್ಪಿತಸ್ಥರ ಪೆರೇಡ್ ನಡೆಸಿ ವಿಚಾರಣೆ ನಡೆಸಿದ ಆಯುಕ್ತರು ಸೂಕ್ತ ಎಚ್ಚರಿಕೆ ನೀಡಿದರು. ಮಾದಕ ವಸ್ತುಗಳ ದಂಧೆಗಳನ್ನು ಹತ್ತಿಕ್ಕಲು ಇಲಾಖೆ ಸನ್ನದ್ಧವಾಗಿದೆ ಎಂದು ಎಚ್ಚರಿಕೆ ನೀಡಿದ ಅವರು ಯಾವುದೇ ಕಾರಣಕ್ಕೆ ಸಮಾಜದ ಸ್ವಾಸ್ಥ್ಯ ಕದಡುವ ಇಂತಹ ಚಟುವಟಿಯಲ್ಲಿ ಭಾಗಿಯಾಗಿ ಮತ್ತೆ ಬಾಲ ಬಿಚ್ಚೀರಿ ಜೋಕೆ ಎಂದು ಖಡಕ್ ವಾರ್ನಿಂಗ್ ರವಾನಿಸಿದರು.
ಪರೇಡ್ನಲ್ಲಿ ಭಾಗಿಯಾದ ಹಳೆಯ ತಪ್ಪಿತಸ್ಥರಿಗೆ ಇನ್ನು ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದಾಗಿ ಸೂಚನೆ ನೀಡಲಾಯಿತು. ಮಾತ್ರವಲ್ಲದೇ ಪೆರೇಡ್ ನಲ್ಲಿ ಭಾಗವಹಿಸಿದ ಹಳೆಯ ತಪ್ಪಿತಸ್ಥರ ಇತ್ತೀಚಿನ ಚಟುವಟಿಕೆಗಳ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ನಗರ ಪೊಲೀಸ್ ಆಯುಕ್ತರು ಪೊಲೀಸರಿಗೆ ಸೂಚಿಸಿದರು.