ಮಂಗಳೂರು, ಜು 22 (DaijiworldNews/SM): ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಭೀತಿ ಹಿನ್ನೆಲೆಯಲ್ಲಿ ಜನರಲ್ಲಿ ಗೊಂದಲ ಬೇಡ ಎಂದು ಮಲೇರಿಯಾ ಹಾಗೂ ಡೆಂಗ್ಯೂ ತಜ್ಞ ಡಾ. ಶ್ರೀನಿವಾಸ್ ಕಕ್ಕಿಲಾಯ ಹೇಳಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ, ಮನಪಾ ಅಧಿಕಾರಿಗಳಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಡೆಂಗ್ಯೂ ರೋಗದಿಂದ ಸಾವಿನ ಸಂಖ್ಯೆ ಅತಿ ಕಡಿಮೆಯಾಗಿದೆ. ವೈದ್ಯರ ಮೇಲೆ ವಿನಾಕಾರಣ ಒತ್ತಡ ಹೇರಬಾರದು. ರೋಗಕ್ಕೆ ಸೂಕ್ತ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ರೋಗ ನಿಯಂತ್ರಣ ಇಲಾಖೆಯ ಜವಾಬ್ದಾರಿಯಾಗಿದ್ದು, ರೋಗದ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ಪ್ರದೇಶವನ್ನು ಸ್ವಚ್ಚವಾಗಿಡಬೇಕು. ಇದರಿಂದ ಸೊಳ್ಳೆ ಉತ್ಪತ್ತಿ ತಡೆ ಸಾಧ್ಯವಾಗಲಿದೆ ಎಂದರು.
ಬೆಳಗ್ಗೆ-ಸಂಜೆ ಕಡಿಯುತ್ತೆ ಸೊಳ್ಳೆ:
‘ಇಡಿಸಿ’ ಎಂಬ ಸೊಳ್ಳೆ ಈ ಡೆಂಗ್ಯು ಹರಡಲು ಕಾರಣವಾಗಿದೆ. ಈ ಸೊಳ್ಳೆ ಸಾಮಾನ್ಯವಾಗಿ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಕಚ್ಚುವ ಸೊಳ್ಳೆಯಾಗಿದೆ. ಆದರಿಂದ್ದ ಈ ಸಂದರ್ಭ ಸಾರ್ವಜನಿಕರು ಎಚ್ಚರದಿಂದಿರಲು ತಿಳಿಸಿದ್ದಾರೆ.
ಪಪ್ಪಾಯ ಎಲೆಯ ರಸದಿಂದ ಡೆಂಗ್ಯೂ ನಿಯಂತ್ರಣ ಅಸಾಧ್ಯ:
ಇನ್ನು ಡೆಂಗ್ಯೂ ರೋಗಕ್ಕೆ ಪಪ್ಪಾಯ ಎಲೆ ರಸ ಔಷಧ ಎನ್ನುವ ವಿಷಯ ವೈರಲ್ ಆಗುತ್ತಿದ್ದು, ಇದಕ್ಕೆ ಡೆಂಗ್ಯೂ ತಜ್ಞ ಡಾ. ಶ್ರೀನಿವಾಸ್ ಕಕ್ಕಿಲಾಯ ಸ್ಪಷ್ಟನೆ ನೀಡಿದ್ದಾರೆ. ಪಪ್ಪಾಯ ಎಲೆಯಿಂದ ಡೆಂಗ್ಯೂ ಗುಣಮುಖವಾಗುತ್ತದೆ ಎನ್ನುವ ವಿಚಾರ ಸತ್ಯಕ್ಕೆ ದೂರವಾದುದು. ಪಪ್ಪಾಯ ಎಲೆ ರಸದಲ್ಲಿ ಯಾವುದೇ ರೋಗ ನಿರೋಧಕವಿಲ್ಲ.
ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದ್ದು ಜನ ಇದಕ್ಕೆ ಕಿವಿಗೊಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದಾರೆ.