ಕಾಸರಗೋಡು, ಜು 22 (DaijiworldNews/SM): ಜಿಲ್ಲೆಯಲ್ಲಿ ವರ್ಷಧಾರೆ ಮುಂದುವರಿದಿದ್ದು, ಮನೆ ಕುಸಿದು ಐವರು ಗಾಯಗೊಂಡಿರುವ ಘಟನೆ ನಡೆದಿದೆ. ಬಳಾಲ್ ಗ್ರಾಮ ಪಂಚಾಯತ್ ನ ಕನಕಪಳ್ಳಿ ಎಂಬಲ್ಲಿ ಹಂಚಿನ ಮನೆ ಕುಸಿದು ಬಿದ್ದು ಮನೆಯಲ್ಲಿದ್ದ ಐವರು ಗಾಯಗೊಂಡಿದ್ದಾರೆ.
ಭಾರೀ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಮನೆಯಲ್ಲಿದ್ದ ಪಿ.ಸಿ.ರಾಜು, ಅವರ ಪತ್ನಿ ಅನು ಮತ್ತು ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಅನು ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಮತ್ತು ಉಳಿದವರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಗಾಳಿ ಮಳೆಗೆ ಜಿಲ್ಲೆಯಲ್ಲಿ ೧ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೃಷಿ ನಾಶವಾಗಿದೆ. ಕಳೆದ 24 ತಾಸುಗಳಲ್ಲೇ 11,71,500 ರೂಪಾಯಿಯ ಕೃಷಿ ಹಾನಿಯಾಗಿದೆ. ಜಿಲ್ಲೆಯಲ್ಲಿ ಅಡಕೆ, ಬಾಳೆ, ತೆಂಗು, ರಬ್ಬರ್ ಸಸಿಗಳು, ಕರಿಮೆಣಸು ಬಳ್ಳಿಗಳು ನಾಶವಾಗಿವೆ.
29 ಹೆಕ್ಟೇರ್ ಭತ್ತದ ಕೃಷಿ, 18.2 ಹೆಕ್ಟೇರ್ ತರಕಾರಿ ಕೃಷಿ ನಾಶಗೊಂಡಿದೆ. ಪರಪ್ಪ ಬ್ಲೋಕ್ ನಲ್ಲಿ ಅತ್ಯಧಿಕ ಕೃಷಿ ನಾಶ ಉಂಟಾಗಿದೆ. ಪರಪ್ಪ ಬ್ಲೋಕ್ ನಲ್ಲಿ ಅತ್ಯಧಿಕ ತರಕಾರಿ ಕೃಷಿನಾಶವಾಗಿದೆ. ಕಾಞಂಗಾಡ್ ಬ್ಲೋಕ್ ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಭತ್ತದ ಕೃಷಿ ಹಾನಿಗೊಂಡಿದೆ. ಮಂಜೇಶ್ವರದಲ್ಲಿ 5 ಹೆಕ್ಟೇರ್, ಕಾಸರಗೋಡಿನಲ್ಲಿ ಮೂರು, ಪರಪ್ಪದಲ್ಲಿ ಒಂದು ಹೆಕ್ಟೇರ್ ಕೃಷಿನಾಶವಾಗಿದೆ.
ಇನ್ನು ಭಾರೀ ಮಳೆ ಜೊತೆಗೆ ಕಡಲ್ಕೊರೆತ ಕೂಡಾ ಉಂಟಾಗಿದೆ. ಮುಸೋಡಿ, ಶಾರದಾ ನಗರ, ಹನುಮಾನ್ ನಗರ, ಮಣಿ ಮುಂಡ ಮೊದಲಾದೆಡೆ ಕಡಲ್ಕೊರೆತ ಉಂಟಾಗಿದ್ದು, ಕೆಲ ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.