ಕಾಸರಗೋಡು, ಡಿ 15: ಅರಬ್ಬೀ ಸಮುದ್ರದ ಆಳ ಸಮುದ್ರದಲ್ಲಿ ಓಖೀ ಚಂಡಮಾರುತದ ಪರಿಣಾಮ ಸೃಷ್ಟಿಯಾದ ಅನಾಹುತದಿಂದ ಸಾವಿರಾರು ಮೀನುಗಾರರ ಮೃತದೇಹಗಳು ಪತ್ತೆಯಾಗುತ್ತಿದೆ.
ದುರಂತ ನಡೆದು 16 ದಿನಗಳು ಕಳೆದ ಬಳಿಕ ಮೃತರ ಸಂಖ್ಯೆ 72ಕ್ಕೆ ಏರಿದೆ. ಕಲ್ಲಿಕೋಟೆ ತೀರದ ಅರಬ್ಬೀ ಸಮುದ್ರ ತೀರದಲ್ಲಿ ನಿನ್ನೆ ಸುಮಾರು ಆರು ಮೀನು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಆಳ ಸಮುದ್ರದಲ್ಲಿ ಇನ್ನೂ ಮೃತದೇಹಗಳು ತೇಲಾಡುತ್ತಿರುವುದಾಗಿ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ತಿಳಿಸಿದ್ದಾರೆ. ಇದರಿಂದಾಗಿ ಇನ್ನೂ 10 ದಿನಗಳ ಕಾಲ ನಾಪತ್ತೆಯಾದ ಮೀನು ಕಾರ್ಮಿಕರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಲು ಕೇಂದ್ರ ಹಾಗೂ ಕೇರಳ ಸರಕಾರ ತೀರ್ಮಾನಿಸಿದ್ದು, ಕೇರಳ ತೀರ ಪ್ರದೇಶದ ಆಳ ಸಮುದ್ರದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಮೀನು ಕಾರ್ಮಿಕರ ಲೆಕ್ಕಾಚಾರದಲ್ಲಿ ಈಗಲೂ ಗೊಂದಲ ಮುಂದುವರಿದಿದ್ದು, ಓಖೀ ಚಂಡಮಾರುತ ಸಂದರ್ಭದಲ್ಲಿ ಆಳ ಸಮುದ್ರಕ್ಕೆ ಎಷ್ಟು ಬೋಟ್ಗಳು, ಎಷ್ಟು ಕಾರ್ಮಿಕರು ಮೀನುಗಾರಿಕೆಗೆ ತೆರಳಿದ್ದಾರೆ ಎಂಬ ನಿಖರ ಮಾಹಿತಿ ಸಿಕ್ಕಿಲ್ಲ.
ಸಮುದ್ರದಲ್ಲಿ ಪತ್ತೆಯಾದ ಮೃತದೇಹಗಳ ಪೈಕಿ 47ರಷ್ಟು ದೇಹಗಳ ಗುರುತು ಸಿಕ್ಕಿಲ್ಲ. ಮೃತದೇಹಗಳನ್ನು ಕಲ್ಲಿಕೋಟೆ ಜಿಲ್ಲಾಸ್ಪತ್ರೆ, ಯಲ್ಲಿರಿಸಲಾಗಿದೆ. ತಿರುವನಂತಪುರ ಆಲುವ ಜನರಲ್ ಆಸ್ಪತ್ರೆ, ಮಲಪ್ಪುರಂ ತಿರೂರು ಜನರಲ್ ಆಸ್ಪತ್ರೆಗಳಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ. ಮೃತದೇಹ ಗುರುತು ಹಚ್ಚುವುದಕ್ಕಾಗಿ ಕುಟುಂಬದವರ ಡಿಎನ್ಎ ಟೆಸ್ಟ್ ಗಳನ್ನು ಮಾಡಲು ನಿರ್ಧರಿಸಲಾಗಿದೆ.
ಮೃತದೇಹಗಳ ಪತ್ತೆಗಾಗಿ ಕೇರಳ ತೀರ ಪ್ರದೇಶದಿಂದ ಮಂಗಳೂರಿನವರೆಗೂ ಆಳ ಸಮುದ್ರದಲ್ಲಿ ಕಾರ್ಯಾಚರಣೆ ಮುಂದುವರಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.