ಮಂಗಳೂರು, ಜು 23 (Daijiworld News/MSP): ಹಾಡುಹಗಲೇ ಮಳಲಿ ಸೈಟ್ ಬಳಿ ಫೈನಾನ್ಶಿಯರ್ ನ್ನು ಅಡ್ಡಗಟ್ಟಿ 2.5ಲಕ್ಷ ರೂ. ನಗದು ದರೋಡೆಗೈದ ಪ್ರಕರಣದ ಮಾಸ್ಟರ್ ಮೈಂಡ್ , ಗಡಿಪಾರು ಆರೋಪಿ ರೌಡಿಶೀಟರ್ ಉಳಾಯಿಬೆಟ್ಟು ನಿವಾಸಿ ಖಾಲಿದ್ ಯಾನೆ ಕೋಯ (32) ಬಜ್ಪೆ ಪೊಲೀಸರು ಉಳಾಯಿಬೆಟ್ಟುವಿನಲ್ಲಿ ಬಂಧಿಸಿದ್ದಾರೆ. ಈತನಿಂದ 50 ಸಾವಿರ ರೂ. ನಗದು, ಎರಡು ಮೊಬೈಲ್ ಫೋನ್, 1 ತಲವಾರು, 1 ಚೂರಿ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ವಿವರ: ನಗರದ ಮರೋಳಿಯ ಸೆಂಥಿಲ್ ಕುಮಾರ್ ಎಂಬವರು ಸಣ್ಣ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದು,ಜು. 14ರಂದು ಬೆಳಗ್ಗೆ 10ಗಂಟೆಗೆ ತನ್ನ ಮನೆಯಾದ ಮರೋಳಿಯಿಂದ ತನ್ನ ಬೈಕಿನಲ್ಲಿ ಪೊಳಲಿ ಅಡ್ಡೂರಿನಿಂದ ಮರಳು ಯಾರ್ಡ್ ರಸ್ತೆಯಲ್ಲಿ ಮಳಲಿ ಸೈಟಿಗೆ ಹೋಗುತ್ತಿದ್ದರು. ಈ ಸಂದರ್ಭ ಮಧ್ಯಾಹ್ನ 2.30ಕ್ಕೆ ಮೊಗರು ಮಳಲಿ ಸೈಟ್ ಬಳಿ ಹೋಗುತ್ತಿರುವಾಗ ಎರಡು ಬೈಕ್ನಲ್ಲಿ ಬಂದ ನಾಲ್ಕು ಮಂದಿ ಯುವಕರು ಬೈಕಿಗೆ ತಮ್ಮ ಬೈಕನ್ನು ಅಡ್ಡಯಿಟ್ಟು 'ನಿನ್ನಲ್ಲಿದ್ದ ಹಣ ಕೊಡು ಇಲ್ಲದಿದ್ದರೆ ಕೊಲ್ಲುತ್ತೇವೆ' ಎಂದು ತಲವಾರು, ಚೂರಿ ತೋರಿಸಿ ಬೆದರಿಸಿದ್ದರು. ಆ ಬಳಿಕ ಸೆಂಥಿಲ್ ಅವರಿಗೆ ಬೆದರಿಕೆಯೊಡ್ದಿ ಬೈಕಿನ ಬಾಕ್ಸನ್ನು ಓಡೆದು ಅದರಲ್ಲಿದ್ದ 2.5ಲಕ್ಷ ರೂ. ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ನಡೆದ ಮೂರೇ ದಿನದಲ್ಲಿ ಅಬ್ದುಲ್ ಅಝೀಜ್ ಅಲಿಯಾಸ್ ನೌಷಾದ್ (19), ಮಹಮ್ಮದ್ ಮುಸ್ತಾಫ (23),ಆಶ್ಲೇಷ್ (20) ಎಂಬವರನ್ನು ಬಂಧಿಸಲಾಗಿತ್ತು. ಈ ಸಂದರ್ಭ ಪ್ರಕರಣದ ಹಿಂದಿನ ರೂವಾರಿ ಗಡಿಪಾರದ ಖಾಲಿದ್ ಎಂದು ತಿಳಿದುಬಂದಿತ್ತು. ಖಾಲಿದ್ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 4 ಕೊಲೆ ಯತ್ನ ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣ, ಬಜಪೆ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣ ದಾಖಲಾಗಿದ್ದು ಈತನನ್ನು ಗಡಿಪಾರು ಮಾಡಲಾಗಿತ್ತು. ಆದರೂ ಈತ ತಲೆಮರೆಸಿಕೊಂಡು ಇತರ ಸಹಚರರೊಂದಿಗೆ ಸೇರಿ ಮಳಲಿಯಲ್ಲಿ ಫೈನಾನ್ಸ್ದಾರ ಸೆಂಥಿಲ್ ಕುಮಾರ್ ಅವರನ್ನು ದರೋಡೆ ಮಾಡಿದ್ದ.