ಮಂಗಳೂರು, ಜು 23 (Daijiworld News/MSP): ಸುಬ್ರಹ್ಮಣ್ಯ - ಸಕಲೇಶಪುರ ರೈಲು ಮಾರ್ಗದ ಮಣಿಬಂಡ ಎಂಬಲ್ಲಿ ಹಳಿಗೆ ಉರುಳಲು ಸಿದ್ಧಗೊಂಡ ಬಂಡೆಗಲ್ಲು ತೆರವು ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಜು.24ರ ವರೆಗೆ ಈ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳು ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿಕೂಲ ಹವಾಮಾನದ ನಡುವೆ ಹಳಿಯ ಮೇಲೆ ಉರುಳುವಂತಿದ್ದ ಬೃಹತ್ ಬಂಡೆ ಸ್ಫೋಟಿಸಿ ಪುಡಿ ಮಾಡಿ ಅದನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಆದರೆ ಒಂದೆಡೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದರೆ ಇನ್ನೊಂದೆಡೆ ಬಂಡೆಯ ಚೂರುಗಳು ಮತ್ತು ಮಣ್ಣುಗಳು ಬಿದ್ದು ಕುಸಿಯುತ್ತಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಹಗಲು ಮತ್ತು ರಾತ್ರಿ ಎರಡೂ ಪಾಳಿಯಲ್ಲಿ ರೈಲ್ವೇ ಇಲಾಖೆಯ ಎಂಬತ್ತರಷ್ಟು ಮಂದಿ ಕಾರ್ಮಿಕರು ಹಿಟಾಚಿ , ಜೆಸಿಬಿ ಬಳಸಿ ಕೆಲಸ ಮಾಡುತ್ತಿದ್ದಾರೆ. ಕಂಪ್ರಸರ್ ಹಾಗೂ ಸ್ಪೋಟಕ ಬಳಸಿ ಬಂಡೆಗಳನ್ನು ತೆರವು ಮಾಡಲಾಗುತ್ತಿದೆ. ಆದರೆ ಭಾರೀ ಮಳೆಯೂ ಕಾರ್ಯಾಚರಣೆಗೆ ತಡೆ ಒಡ್ಡುತ್ತಿದೆ.ಹೀಗಾಗಿ ತೆರವು ಕಾರ್ಯಾಚರಣೆ ಇನ್ನು ಎರಡು ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ.
ಈಗಾಗಲೇ ಹಳಿಗೆ ಕುಸಿದಿರುವ ಕೆಸರು ಮಿಶ್ರಿತ ಮಣ್ಣು ಮತ್ತು ಕುಸಿಯುವಂತಿರುವ ಬಂಡೆಯ ತೆರವು ಕಾರ್ಯ ಮುಗಿಸಲು ಇನ್ನೆರಡು ದಿನ ಬೇಕಾಗಬಹುದು. ಈ ನಡುವೆ ಮತ್ತೆ ಹಳಿಗೆ ಮಣ್ಣು , ಬಂಡೆಕಲ್ಲುಗಳು ಕುಸಿದು ಬಿದ್ದರೆ ಮತ್ತಷ್ಟು ದಿನ ತೆರವು ಕೆಲಸಕ್ಕೆ ತಗುಲಿ ರೈಲು ಸಂಚಾರ ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ.