ಕಾಸರಗೋಡು,ಸೆ.13: ವಾಟ್ಸ್ ಆಪ್ ಮೂಲಕ ಮಹಿಳೆಯರನ್ನು ವಂಚಿಸುತ್ತಿದ್ದ ಯುವಕನೋರ್ವನನ್ನು ಕಾಸರಗೋಡು ವಿದ್ಯಾನಗರ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬದಿಯಡ್ಕ ದಲ್ಲಿ ಮೊಬೈಲ್ ರಿಚಾರ್ಜ್ ಮಳಿಗೆ ಹೊಂದಿರುವ ಬೆಳಿಂಜೆಯ ಝುಬೈರ್ ಬಂಧಿತ ಆರೋಪಿ.
ಆಯಿಷಾ ಎಂಬ ಹೆಸರಿನಲ್ಲಿ ಈತ ವಾಟ್ಸ್ ಆಪ್ ಗ್ರೂಪ್ ಮಾಡಿ ಹಲವು ಮಹಿಳೆಯರ ನಂಬರ್ ಗಳನ್ನು ಸೇರ್ಪಡೆಗೊಳಿಸಿ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ. ಮಾತ್ರವಲ್ಲದೆ, ಇಶಾಲ್ ರಾವ್ , ಕಿನಾವ್ ಸೇರಿದಂತೆ ಬೇರೆ ವಾಟ್ಸ್ ಆಪ್ ನ್ನು ಹೊಂದಿದ್ದ. ಈ ವಾಟ್ಸ್ ಆಪ್ ಪ್ರೊಫೈಲ್ ನಲ್ಲಿ ಕೆಲ ಯುವತಿಯರ ಫೋಟೋ ಹಾಕಿ ದುರ್ಬಳಕೆ ಮಾಡಿಕೊಂಡಿದ್ದ. ಮೊಬೈಲ್ ರಿಚಾರ್ಜ್ ಅಂಗಡಿಗೆ ಬರುವ ಯುವತಿಯರಿಂದ ರೀಚಾರ್ಚ್ ಸಂದರ್ಭದಲ್ಲಿ ಲಭಿಸುವ ನಂಬರನ್ನು ಬಳಸಿ ಈ ವಂಚನೆ ನಡೆಸುತ್ತಿದ್ದ ಎನ್ನಲಾಗಿದೆ. ಆರೋಪಿ 200 ಕ್ಕೂ ಅಧಿಕ ಮಂದಿ ಮಹಿಳೆಯರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಇನ್ನು ಆರೋಪಿ ವಿರುದ್ಧ ಯಾರು ಕೂಡ ದೂರು ನೀಡದ ಹಿನ್ನೆಲೆ ಎಚ್ಚರಿಕೆ ನೀಡಿ ಆರೋಪಿಯನ್ನು ಬಿಡಿಗಡೆಗೊಳಿಸಲಾಗಿದೆ.