ಮಂಗಳೂರು, ಡಿ 15: ಹತ್ತು ದಿನಗಳ ಕರಾವಳಿ ಉತ್ಸವದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಮಂಗಳೂರು ನಗರ ಸಜ್ಜುಗೊಳ್ಳುತ್ತಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಕರಾವಳಿ ಉತ್ಸವವನ್ನು ವ್ಯವ ಸ್ಥಿತವಾಗಿ ಆಯೋಜಿಸಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ವೈವಿಧ್ಯಮಯ ವಸ್ತು ಪ್ರದರ್ಶನ, ಆಹಾರೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕದ್ರಿ ಉದ್ಯಾನವನ, ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನ, ಪಣಂಬೂರು ಬೀಚ್ ನಲ್ಲಿ ಕಾರ್ಯಕ್ರಮ ನಡೆಯಲಿದೆ.
ನೆಹರು ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಮೆರವಣಿಗೆ ನಡೆಸುವ ಮೂಲಕ ಹತ್ತು ದಿನಗಳ ಕಾಲ ನಡೆಯಲಿರುವ ಈ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಸಚಿವ ಯು.ಟಿ ಖಾದರ್ ಮೆರವಣಿಗೆಗೆ ಚಾಲನೆ ನೀಡಲಿದ್ದು, ಅರಣ್ಯ ಸಚಿವ ಬಿ. ರಮಾನಾಥ ರೈ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ನಟ ಪ್ರಕಾಶ್ ರೈ ಕರಾವಳಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಈ ಬಾರಿ ಕರಾವಳಿ ಉತ್ಸವದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ತುಳು ಶೈಲಿಯ ವಸ್ತು ಪ್ರದರ್ಶನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಖ್ಯಾತ ರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ಅವರ ತಂಡದ ನಾಟಕ ಪ್ರದರ್ಶನದ ಜೊತೆಗೆ, ಸಾಂಪ್ರದಾಯಿಕ ಮತ್ತು ಜಾನಪದ ನೃತ್ಯ ಪ್ರದರ್ಶನವಿದೆ.