ವಿರಾಜಪೇಟೆ, ಡಿ 15: ಕಲ್ಲಡ್ಕ ಪ್ರಭಾಕರ ಭಟ್ಗೆ ತಾಕತ್ತು ಇದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಅರಣ್ಯ ಸಚಿವ ರಮನಾಥ್ ರೈ ಸವಾಲು ಹಾಕಿದ್ದಾರೆ.
ಪ್ರಭಾಕರ ಭಟ್ ನನ್ನ ಎದುರು ಸ್ಪರ್ಧಿಸಿದರೆ ಅವರಿಗೆ ಡೆಪಾಸಿಟ್ ಕೂಡ ಸಿಗುವುದಿಲ್ಲ. ತಾಕತ್ತು ಇದ್ದರೆ ನನ್ನ ವಿರುದ್ಧ ನಿಲ್ಲಲಿ ಎಂದು ಅವರು ಹೇಳಿದ ಅವರು, ಪ್ರಭಾಕರ ಭಟ್ ಶಾಲೆಗೆ ಅನುದಾನ ಸ್ಥಗಿತ ಮಾಡಿರುವುದು ಸರಿಯಾಗಿದೆ. ಅವರ ಶಾಲೆಯ ವಿಚಾರದ ಚರ್ಚೆ ಅರ್ಥಹೀನ. ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರಕಾರ ಬಿಸಿಯೂಟ ನೀಡುತ್ತದೆ. ಪ್ರಭಾಕರ ಭಟ್ ಶಾಲೆ ಅನುದಾನಿತ ಶಾಲೆಯಾಗಿದ್ದು, ಅದಕ್ಕೆ ಬಿಸಿಯೂಟ ಸಿಗುತ್ತದೆ. ಆದರೆ ಅವರಿಗೆ ಬಿಸಿಯೂಟ ಬೇಡ ಬದಲಾಗಿ ಹಣ ಬೇಕು, ಅದೂ ದೇವಸ್ಥಾನ ಹಣ ಎಂದು ಹೇಳಿದರು.
ದೇವಸ್ಥಾನದ ಹಣವನ್ನು ಶಾಲೆಗೆ ಬಳಸಿಕೊಂಡಿರುವುದು ಸರಿಯಲ್ಲ. ದೇವಾಲಯದ ಹಣ ದೇವಾಲಯಕ್ಕೆ ಮಾತ್ರ ಬಳಕೆಯಾಗಬೇಕು. ದೇವಸ್ಥಾನದಿಂದ ಶಾಲೆಗೆ ಹೋಗುವ ಹಣಕ್ಕೆಸರಕಾರ ಕಡಿವಾಣ ಹಾಕಿರುವುದು ಸರಿಯಾಗಿಯೇ ಇದೆ. ಕಲ್ಲಡ್ಕ ಪ್ರಭಾಕರ ಭಟ್ ಕೂಡ ಮಂಜೂರಾತಿ ಆಗಿದ್ದ ಒಂದು ಶಾಲೆಯನ್ನು ಸ್ವಾರ್ಥಕ್ಕಾಗಿ ಮುಚ್ಚಿದ್ದಾರೆ ಎಂದು ಸಚಿವರು ತಿಳಿಸಿದರು.