ಯಾದಗಿರಿ, ಡಿ 15: ನಗರದಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಶ್ರೀರಾಮಸೇನೆಯ ಪ್ರಮುಖರ ಮೇಲೆ ನಗರ ಠಾಣೆಯ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿದ್ದಾರೆ.
ಡಿ.12ರಂದು ಸಂಜೆ ನಗರದ ವನಿಕೇರಿ ಮೈದಾನದಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ತೆಲಂಗಾಣದ ಗೋಶಾಮಹಲ್ ಕ್ಷೇತ್ರದ ಶಾಸಕ ರಾಜಾಸಿಂಗ್ ಠಾಕೂರ್ ಪ್ರಧಾನ ಭಾಷಣ ಮಾಡಿದ್ದರು. ಅವರೊಂದಿಗೆ ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಪ್ರಮೋದ ಮುತಾಲಿಕ್, ವಿಜಯ ಪಾಟೀಲ ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿದ್ದಾರೆ ಎಂದು ದಾಖಲಿಸಿರುವ ದೂರಿನಲ್ಲಿ ಪೊಲೀಸರು ಆರೋಪಿಸಿದ್ದಾರೆ.
ವಿರಾಟ್ ಹಿಂದೂ ಸಮಾವೇಶದಲ್ಲಿ ಇವರು ಸಮಾಜದಲ್ಲಿ ಗಲಭೆಗೆ ಪ್ರಚೋದನೆ ನೀಡುವಂತಹ ಭಾಷಣ ಮಾಡಿದ್ದಾರೆ. ಅಸ್ತ್ರ, ಆಯುಧ ಬಳಕೆ ಕುರಿತು ಯುವಕರನ್ನು ಪ್ರಚೋದಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರು.
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಜೇವರ್ಗಿ ತಾಲ್ಲೂಕಿನ ಆಂದೋಲಾ ಕರುಣೇಶ್ವರಮಠದ ಸಿದ್ದಲಿಂಗ ಸ್ವಾಮೀಜಿ, ಶ್ರೀರಾಮಸೇನೆ ಹೈದರಾಬಾದ್ ಕರ್ನಾಟದ ಘಟಕ ಅಧ್ಯಕ್ಷ ವಿಜಯ ಪಾಟೀಲ್, ತೆಲಂಗಾಣದ ಗೋಶಾಮಹಲ್ ಕ್ಷೇತ್ರದ ಶಾಸಕ ರಾಜಾಸಿಂಗ್ ಠಾಕೂರ್ ಅವರ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿದ್ದಾರೆ.