ಮಂಗಳೂರು, ಜು 23 (DaijiworldNews/SM): ನಗರದಲ್ಲಿ ಸಾಂಕ್ರಾಮಿಕ ಡೆಂಗ್ಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಸಲಾಯಿತು. ಡ್ರೈವ್ ಡೇ ಅಭಿಯಾನದ ಮೂಲಕ ನಗರದಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೊಳ್ಳೆಗಳು ಉತ್ಪತ್ತಿಯಾಗಲು ಲಾರ್ವ ಕಾರಣವಾಗಿದ್ದು, ಅವುಗಳನ್ನು ನಾಶಪಡಿಸಬೇಕು. ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರು ಎಚ್ಚರಗೊಳ್ಳಬೇಕು. ತಮ್ಮ ಮನೆ ಸುತ್ತಮುತ್ತ ಶುಚಿತ್ವ ಕಾಪಾಡಬೇಕು. ಯಾವುದೇ ತೆರೆದ ಪ್ರದೇಶದಲ್ಲಿ ನೀರು ನಿಲ್ಲದಂತೆ ಜನರು ಜಾಗೃತರಾಗಬೇಕಿದೆ. ಹಾಗೂ ಸಾಂಕ್ರಾಮಿಕ ರೋಗ ತಡೆಗೆ ಜನ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕೆಂದರು.
ಇನ್ನು ಸಾಂಕ್ರಾಮಿಕ ರೋಗದ ಬಗ್ಗೆ ಶಾಲಾ ಕಾಲೇಜುಗಳಲ್ಲೂ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಲಾ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರವಿವಾರದಂದು ನಡೆದಂತಹ ಜಾಗೃತಿ ಅಭಿಯಾನದಲ್ಲಿ ಜಿಲ್ಲಾಧಿಕಾರಿಗಳು ಸ್ವತಃ ಪಾಲ್ಗೊಂಡು ಪರಿಶಿಲನೆ ನಡೆಸಿದರು. ಇನ್ನು ನಗರ ಮೂರು ಪ್ರತಿಷ್ಟಿತ ಮಾಲ್ ಗಳಲ್ಲಿ ಫ್ಲ್ಯಾಶ್ ಮಾಬ್ ಹಾಗೂ ಸಹಿ ಸಂಗ್ರಹ ಅಭಿಯಾನ ಜರಗಿತು.