ಉಡುಪಿ, ಜು 23 (DaijiworldNews/SM): ಅಪರಾಧಕ್ಕಿಂತ ಅಪರಾಧಗಳ ಬಗ್ಗೆ ವದಂತಿ, ಸುಳ್ಳು ಸುದ್ದಿ ನಿಯಂತ್ರಣವೇ ಪೊಲೀಸರಿಗೆ ಇತ್ತೀಚಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸಿದೆ. ದೇಶದಲ್ಲಿ ಕೆಲವು ಸಂಗತಿಗಳು, ಘಟನೆಗಳು ನಡೆದಾಗ ಕೆಲವು ವಿಕೃತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಉಹಾ-ಪೋಹಗಳನ್ನು ಸೃಷ್ಟಿಯಾಗುತ್ತವೆ. ನಾಗರೀಕ ಸಮಾಜವನ್ನು ಪ್ರಚೋದನೆಗೆ ಒಳಪಡಿಸಿ, ಅನೇಕ ದುರಂತ ಘಟನೆಗಳು ದೇಶದಲ್ಲಿ ನಡೆದು ಹೋಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಅಪಹರಣ ಜಾಲ ಸಕ್ರೀಯವಾಗಿದೆ ಮತ್ತು ಮಕ್ಕಳ ಅಪಹರಣವಾಗುತ್ತಿದೆ ಎಂಬ ವದಂತಿ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರವಾನೆಯಾಗುತ್ತಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಾಗೃತಿ ಮೂಡಿಸಲಾಯಿತು.
ಮಕ್ಕಳ ಅಪಹರಣ ಸಂಬಂಧಿಸಿದಂತೆ ಸುಳ್ಳು ಸಂದೇಶಗಳು ಆಧಾರ ರಹಿತವಾಗಿದ್ದು, ಪ್ರಸ್ತುತ ವರ್ತಮಾನದಲ್ಲಿ ಇಂತಹ ಸುದ್ದಿಗಳಿಗೆ ಸಾರ್ವಜನಿಕರು ಸಮೂಹ ಸನ್ನೆಗೆ ಒಳಗಾಗಿ ಅಪರಿಚಿತರು, ಅಮಾಯಕರು, ಆಗಂತಕರ ಜೀವಗಳನ್ನು ಬಲಿ ತೆಗೆದುಕೊಂಡಿರುವ ಹಲವು ಘಟನೆಗಳು ಈ ದೇಶದಲ್ಲಿ ನಡೆದಿದ್ದು, ಹೈದರಾಬಾದ್ನಲ್ಲಿ ಭಿಕ್ಷುಕನೊಬ್ಬನನ್ನು ಮಕ್ಕಳ ಕಳ್ಳನೆಂದು ಹಿಗ್ಗಾ-ಮುಗ್ಗ ತಳಿಸಿದ ಘಟನೆ, ಕೊಪ್ಪಳದ ಕಾರಟಾಗಿಯಲ್ಲಿ ಅಣ್ಣ-ತಂಗಿಯನ್ನು ಮಕ್ಕಳ ಕಳ್ಳರೆಂದು ತಿಳಿದು, ಗ್ರಾಮಸ್ತರ ಗುಂಪೊಂದು ಹಲ್ಲೆ ಮಾಡಿದ ಘಟನೆ, ಕಲ್ಕತ್ತದಲ್ಲಿ ತೃತಿಯ ಲಿಂಗಿಯೊಬ್ಬಳ ಕೈಯಲ್ಲಿ ಮಗು ಇದ್ದ ವಿಚಾರಕ್ಕೆ ಆಕೆಯನ್ನು ಹತ್ಯೆ ಮಾಡಿದ ಘಟನೆ, ಇನ್ನಿತರ ಘಟನೆಗಳು ನಮ್ಮ ಕಣ್ಣೆದುರಿಗಿದೆ.
ಮಕ್ಕಳ ಕಳ್ಳರ ಬಗ್ಗೆ ಕೆಲವು ನಕಲಿ ಫೋಟೋಗಳನ್ನು ಹಾಕಿ, ಬೇರೆ ಎಲ್ಲಿಯೋ ನಡೆದ ಘಟನೆಯನ್ನು ಇಲ್ಲಿಯೇ ನಡೆದಿದೆ ಎಂಬಂತೆ ಬಿಂಬಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ, ವದಂತಿಗಳನ್ನು ಹಬ್ಬಿಸಿ, ಸಮಾಜದಲ್ಲಿ ಭಯದ ವಾತಾವಣ ಸೃಷ್ಟಿ ಮಾಡಿ, ಸಮಾಜದಲ್ಲಿ ಅಶಾಂತಿಯ ವಾತಾವರಣಕ್ಕೆ ಕಾರಣರಾಗುತ್ತಾರೆ. ಮಕ್ಕಳ ಅಪಹರಣವಾಗಬಹುದು. ನಮ್ಮ ಮಕ್ಕಳನ್ನು ಕದಿಯಬಹುದು ಎಂಬ ಸಾಮಾಜಿಕ ಜಾಲತಾಣದ ಚರ್ಚೆಗಳು ಜನತೆಯ ಮೇಲೆ ತೀವ್ರ ಪರಿಣಾಮ ಬೀರಿ, ಅದು ನಂತರ ಆಕ್ರೋಶದ ಹಂತಕ್ಕೆ ತಲುಪಿ ಮೇಲಿನಂತೆ ಹಲವು ಘಟನೆಗಳು ನಮ್ಮ ದೇಶದಲ್ಲೆ ನಡೆದಿವೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ಮತ್ತು ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸಂದೇಶಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದು, ಇಂತಹಾ ಸಂದೇಶ ಒಬ್ಬರಿಂದ ಮತ್ತೊಬ್ಬರಿಗೆ ರವಾನೆಯಾಗಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿರುವ ನಿದರ್ಶನಗಳು ಸಹಾ ನಮ್ಮೆದುರಿಗಿದೆ.
ಒಂದು ವೇಳೆ ಮಕ್ಕಳ ಅಪಹರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರದೇಶ, ಗ್ರಾಮಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ನಾಗರೀಕರು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ ಹಾಗೂ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ಅಪರಿಚಿತರ ಮೇಲೆ ಏಕಾಎಕಿ ಹಲ್ಲೆ, ಕೊಲೆಯತ್ನದಂತಹ ಕೃತ್ಯಗಳಿಗೆ ನಾಗರೀಕರು ಪ್ರಚೋದನೆಗೆ ಒಳಗಾಗಬಾರದು. ಒಂದು ವೇಳೆ ಕಾನೂನನ್ನು ಕೈಗೆತ್ತಿಕೊಂಡರೆ ಅಂತಹಾ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.