ಬಂಟ್ವಾಳ, ಜು 23 (DaijiworldNews/SM): ಶನಿವಾರ ರಾತ್ರಿ ವಿಧಿವಶರಾದ ಹಿರಿಯ ಸಾಹಿತಿ, ಸಂಘಟಕ, ಜಾನಪದ ವಿದ್ವಾಂಸ, ಸಾಮಾಜಿಕ, ಧಾರ್ಮಿಕ, ಸಹಕಾರಿ ನೇತಾರ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವರ ಪಾರ್ಥಿವ ಶರೀರ ಭಾನುವಾರ ಸಂಜೆ 4 ಗಂಟೆಗೆ ಪಂಚಭೂತಗಳಲ್ಲಿ ಲೀನವಾಯಿತು.
ಏರ್ಯ ಅವರ ಅಪೇಕ್ಷೆಯಂತೆ ಏರ್ಯ ಬೀಡು ಮನೆ ವಠಾರದ ಮಜಲು ಗದ್ದೆಯಲ್ಲಿ ಚಿತೆ ನಿರ್ಮಿಸಿ ಅವರ ಅಳಿಯ ಏರ್ಯ ಬಾಲಕೃಷ್ಣ ಹೆಗ್ಡೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು. ಕುಟುಂಬದ ಹಿರಿಯರಾದ ಗೋಪಾಲಕೃಷ್ಣ ರೈ, ಡಾ| ರಾಜಾರಾಮ ಶೆಟ್ಟಿ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಸಹಿತ ಸಹಸ್ರಾರು ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.
ಮೂಲಮನೆಯಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ:
ರವಿವಾರ ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಯಿಂದ ಅವರ ಪಾರ್ಥಿವ ಶರೀರವನ್ನು ಏರ್ಯರು ವಾಸ್ತವ್ಯವಿದ್ದ ಮನೆ ಸಾಕೇತಕ್ಕೆ ತಂದು ಅಲ್ಲಿ ಸುಮಾರು ಅರ್ಧ ಗಂಟೆ ಹೊತ್ತು ಇಟ್ಟು ನಂತರ ಏರ್ಯ ಬೀಡು ಮೂಲ ಮನೆಗೆ ತರಲಾಯಿತು. ಶಾಸ್ತ್ರೀಯ ಕ್ರಮಗಳನ್ನು ಪೂರೈಸಿದ ಬಳಿಕ ಸಾರ್ವಜನಿಕರ ವೀಕ್ಷಣೆಗೆ ಪಾರ್ಥಿವ ಶರೀರವನ್ನು ಇರಿಸಲಾಯಿತು. ವಿವಿಧ ಕ್ಷೇತ್ರದ ಗಣ್ಯರು, ಸಾಹಿತಿಗಳು, ಅವರ ಅಭಿಮಾನಿಗಳು, ಬಂಧು ಮಿತ್ರರು,ಧಾರ್ಮಿಕ. ಸಾಂಸ್ಕೃತಿಕ ಪ್ರಮುಖರು ಏರ್ಯಬೀಡು ಮನೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಸಾಹಿತ್ಯ ಚಟುವಟಿಕೆಯ ಕ್ರಿಯಾಶೀಲತೆಗೆ ಮೂರು ತಲೆಮಾರುಗಳ ಕೊಂಡಿಯಂತಿದ್ದ ಗಟ್ಟಿ ನಂಟೊಂದು ಏರ್ಯರ ಅಗಲಿಕೆಯ ಮೂಲಕ ಕಳಚಿ ಹೋದ ಶೋಕ ಮಡುಗಟ್ಟಿತ್ತು. ನೆರೆದಿದ್ದ ಎಲ್ಲರೂ ಏರ್ಯರ ಕುರಿತಾಗಿ ಗುಣಗಾನದಲ್ಲೇ ನಿರತರಾಗಿದ್ದರು. ಹತ್ತನೇ ತರಗತಿಗೆ ಇವರ ಕಲಿಕೆ ಮುಕ್ತಾಯವನ್ನು ಕಂಡಿತ್ತಾದರೂ ಆ ಬಳಿಕವೂ ಓದುವ ಆಸಕ್ತಿ ಅವರನ್ನು ಸಾಹಿತ್ಯ, ಸಾಂಸ್ಕೃತಿಕ, ಆಧ್ಯಾತ್ಮಿಕ ವಿಷಯಗಳ ತಜ್ಞನನ್ನಾಗಿಸಿತು. ಹಿಂದಿ ಭಾಷೆ ಕಲಿತು ರಾಷ್ಟ್ರ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಬಳಿಕ ಡಾ.ಬಿ. ಚಂದಯ್ಯ ಹೆಗ್ಡೆ ಅವರ ಮೂಲಕ ಇಂಗ್ಲಿಷ್ ಸಾಹಿತ್ಯವನ್ನೂ ಕರಗತ ಮಾಡಿಕೊಂಡರು. ಬಾಲ್ಯದಲ್ಲಿ ಗಾಂಧೀಜಿಯವರಿಂದ ಪ್ರಭಾವಿತರಾಗಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡ ಹಿರಿಮೆ ಏರ್ಯರದು.