ಮಂಗಳೂರು, ಜು 23 (DaijiworldNews/SM): ಸಂಚಾರ ನಿಯಂತ್ರಣಕ್ಕೆ ಹೊಸ ಹೊಸ ಕಾನೂನು ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದ್ದರೂ, ನಿಯಮ ಉಲ್ಲಂಘಿಸುವವರ ಸಂಖ್ಯೆ ಇಳಿಕೆಯಾಗುವುದಿಲ್ಲ. ಮೂಡುಬಿದಿರೆ-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ ನ ಹಿಂಭಾಗದಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಚಾಲಕನ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಬಸ್ ನ ಹಿಂಭಾಗದಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುವುದನ್ನು ಕಂಡು ಸೂರಜ್ ಜೈನ್ ಎಂಬವರು ಫೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಇದನ್ನು ಕಂಡು ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಾಗೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಸ್ ಚಾಲಕನ ಡ್ರೈವಿಂಗ್ ಲೈಸನ್ಸ್ ಹಾಗೂ ಬಸ್ ನ ಸಂಚಾರದ ಪರವಾಣಿಗೆಯನ್ನು ಅಮಾನತುಗೊಳಿಸಲಾಗಿದೆ ಎಂದು ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಮೂಡುಬಿದಿರೆ-ಮಂಗಳೂರು ಹೆದ್ದಾರಿ ಮಧ್ಯದ ವಿದ್ಯಾಗಿರಿಯ ಬಸ್ ನಿಲ್ದಾಣದಲ್ಲಿ ಈ ದೃಶ್ಯ ಕಂಡು ಬಂದಿತ್ತು. ವಿದ್ಯಾರ್ಥಿಗಳಿಗೆ ಹೆಚ್ಚು ಕಮ್ಮಿಯಾದಲ್ಲಿ ಯಾರು ಹೊಣೆ? ಹಾಗೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂರಜ್ ಜೈನ್ ಬರಹದೊಂದಿಗೆ ಫೋಟೋ ಅಪ್ ಲೋಡ್ ಮಾಡಿದ್ದರು.